ಬೆಂಗಳೂರು(BANGLORE) : ಉತ್ತರಕನ್ನಡ ಜಿಲ್ಲೆಯ ಶರಾವತಿ ನದಿ(SHARAVAVATI)ಯ ನೀರನ್ನ ರಾಜಧಾನಿ ಕೊಂಡೋಯ್ಯುವ ಯೋಜನೆಗೆ ಕಂಪನಿಯೊಂದು ಸಮೀಕ್ಷೆ ನಡೆಸಲು ಮುಂದಾಗಿದೆ.

ಲಿಂಗನಮಕ್ಕಿ ಜಲಾಶಯ(LINGANAMAKKI DAM)ದಲ್ಲಿ ವಿದ್ಯುತ್ ಉತ್ಪಾದನೆ ನಂತರ ಸಮುದ್ರಕ್ಕೆ ಹರಿದು ಹೋಗುವ ಸುಮಾರು 40 ಟಿಎಂಸಿ ನೀರನ್ನು ಬಳಸಿಕೊಂಡು ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು  ಸರ್ಕಾರ ಯೋಜಿಸಿದೆ.

ಇದಕ್ಕೆ ಸಂಬಂಧಿಸಿ ಸಮೀಕ್ಷೆ ನಡೆಸಿ ಕಾರ್ಯಸಾಧುಗಳ ವರದಿ ಪಡೆಯಲು ವಿಶ್ವೇಶ್ವರಯ್ಯ ಜಲ ನಿಗಮ (VISHWESHARAYYA WATER CORPORATION) ಟೆಂಡರ್‌ ಕರೆದಿದ್ದು, ಬೆಂಗಳೂರಿನ ಈಐ ಟೆಕ್ಟೋಲಾಜಿಸ್ ಪ್ರೈವೇಟ್ ಕಂಪನಿ, 73 ಲಕ್ಷಕ್ಕೆ ಟೆಂಡರ್‌ ಪಡೆದು ಸಮೀಕ್ಷೆಗೆ ಮುಂದಾಗಿದೆ.

ರಾಜಧಾನಿ ಬೆಂಗಳೂರು ಮತ್ತು ಮಧ್ಯ ಕರ್ನಾಟಕ ಹಾಗೂ ಪೂರ್ವಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದು ಮತ್ತು ಈ ಭಾಗದ ಕೆರೆಗಳ ತುಂಬಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪಶ್ಚಿಮಾಭಿಮುಖವಾಗಿ ಹರಿಯುವ ಶರಾವತಿ ನದಿಯ ನೀರನ್ನು ಬಳಸಿಕೊಳ್ಳುವುದು. ಶರಾವತಿ ಜಲವಿದ್ಯುತ್ ಯೋಜನೆಗೆ ತೊಂದರೆಯಾಗದಂತೆ, ಸಮುದ್ರಕ್ಕೆ ಹರಿದು ಹೋಗುವ ಹೆಚ್ಚುವರಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳುವುದು ಸರ್ಕಾರದ ಉದ್ದೇಶ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ, ವರ್ಷವಿಡಿ ಎಲ್ಲ  ದಿನಗಳಲ್ಲೂ ಹರಿಯುತ್ತಿದೆ ಶರಾವತಿ ನದಿ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಭವಿಷ್ಯದಲ್ಲಿ ಸಾಕಾಗುವಷ್ಟು ಕಾವೇರಿ ನೀರನ್ನು ಪೂರೈಸುವುದು ಕಷ್ಟವಾಗಲಿದೆ. ಹೀಗಾಗಿ, ಮಧ್ಯ ಕರ್ನಾಟಕದ ಬಯಲು ಸೀಮೆಯ ಪ್ರದೇಶಗಳಿಗೆ ನೀರುಣಿಸುವ ಎರಡು ಮಹತ್ವದ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗೆ ಹಾಲಿ ಸೃಜಿಸಲಾಗಿರುವ ಜಾಲಗಳನ್ನು ಬಳಸಿಕೊಂಡೇ ಶರಾವತಿ ಯೋಜನೆ ಜಾರಿಗೊಳಿಸುವ ಉದ್ದೇಶ ಸರ್ಕಾರ ಹೊಂದಿದೆ.