ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದ ಜಗನ್ನಾಥ್ ನಾಯ್ಕ ಅವರ ಸುಳಿವು ಇದುವರೆಗೆ ಸಿಕ್ಕಿಲ್ಲ. ಅವರ ಬರುವಿಕೆಗಾಗಿ ಕುಟುಂಬದವರು ಕಾಯುತ್ತಿದ್ದಾರೆ. ಇಷ್ಟು ದಿನವಾದರೂ ಬಾರದಿರುವುದಕ್ಕೆ ಕುಟುಂಬದವರು ಕಣ್ಣೀರಿಡುತ್ತಿದ್ದಾರೆ. ಈ ವೇಳೆ ಕುಟುಂಬದವರು ಮಾಧ್ಯಮಗಳ ಮುಂದೆ ತನ್ನ ತಂದೆಯ ಹುಡುಕಿಕೊಡಿ, ಇಲ್ಲವೇ ಅಸ್ಥಿಯನ್ನಾದರೂ ತಂದು ಕೊಡಿ ಎಂದು ಹೇಳಿದ್ದಾರೆ.
ಜುಲೈ 16 ರಂದು ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಜಗನ್ನಾಥ್ ನಾಪತ್ತೆಯಾಗಿದ್ದರು. ಮೃತ ಲಕ್ಷ್ಮಣ್ ನಾಯ್ಕ ಸಂಬಂಧಿಯಾಗಿದ್ದ ಜಗನ್ನಾಥ್ ಹೋಟೆಲ್‌ನಲ್ಲಿ ಕೆಲಸಕ್ಕೆಂದು ತೆರಳಿದ ವೇಳೆಯಲ್ಲಿ ಗುಡ್ಡ ಕುಸಿದಿತ್ತು. ಘಟನೆಯಲ್ಲಿ ಲಕ್ಷ್ಮಣ್ ನಾಯ್ಕ, ಆತನ ಪತ್ನಿ ಶಾಂತಿ ನಾಯ್ಕ, ಮಕ್ಕಳಾದ ಅವಂತಿಕಾ ಹಾಗೂ ರೋಷನ್ ಮೃತದೇಹಗಳು ಸಿಕ್ಕಿದೆ. ಆದರೆ, 13 ದಿನದಿಂದ ಶೋಧ ನಡೆದರೂ ಜಗನ್ನಾಥ್ ಅವರ ಸುಳಿವು ದೊರೆತಿಲ್ಲ.
ಹೀಗಾಗಿ ತಂದೆ ಜಗನ್ನಾಥ್ ಅವರನ್ನ ನೋಡದ ಮೂವರು ಮಕ್ಕಳು ಹಾಗೂ ಪತ್ನಿ ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಜಗನ್ನಾಥ್ ಪುತ್ರಿಯರು, ಕಾರ್ಯಾಚರಣೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹನ್ನೆರಡು ದಿನದಿಂದ ತಂದೆ ಬಗ್ಗೆ ಏನು ಸುದ್ದಿಯೂ ಇಲ್ಲ. ಅವರನ್ನ ನಾವು ನೋಡಬೇಕು ಅವರು ನಮಗೆ ಸಿಗಬೇಕು. ಯಾವ ಸ್ಥಿತಿಯಲ್ಲಿ ಇದ್ದರು ಅವರನ್ನ ಒಮ್ಮೆ ನೋಡಬೇಕೆಂದು ಕಣ್ಣೀರಿಟ್ಟಿದ್ದಾರೆ.
ಮನೆಯಲ್ಲಿ ಜಗನ್ನಾಥ ಪತ್ನಿ ಬೇಬಿ, ಇವರೆಗೂ ಊಟ ತಿಂಡಿ ಏನೂ ಸೇವಿಸಿಲ್ಲ. ತಂದೆಯ ನೆನಪಿನಲ್ಲಿಯೇ ಮಕ್ಕಳು ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಸರ್ಕಾರ ನನ್ನ ತಂದೆಯನ್ನ ಹುಡುಕಿಕೊಡಲಿ. ಅವರ ಯಾವ ಸ್ಥಿತಿಯಲ್ಲಿದ್ದರು ಒಮ್ಮೆ ನೋಡಬೇಕು ಎಂದು ಕುಟುಂಬದವರು ಹೇಳಿದ್ದಾರೆ.