ಅಂಕೋಲಾ : ತಾಲೂಕಿನಲ್ಲಿ ಸಂಭವಿಸಿದ ಮಹಾ ದುರಂತಕ್ಕೆ ಬಡ ಕುಟುಂಬಗಳು ಕಂಗಾಲಾಗಿವೆ. ಘಟನೆಗೆ ಸಂಬಂಧಿಸಿ 13 ದಿನಗಳಿಂದ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತವಾಗಿರುವುದಕ್ಕೆ ಕೇರಳ ಶಾಸಕರ ನಡುವೆ ಭಿನ್ನ ಅಭಿಪ್ರಾಯ, ಅಸಮಾಧಾನ ಕಂಡು ಬಂದಿದೆ.
ಭಾನುವಾರ ಸಂಜೆ ಶಿರೂರಿನ ಕಾರ್ಯಾಚರಣೆ ಸ್ಥಳದಿಂದ ಇದ್ದಕ್ಕಿದ್ದಂತೆ ಶೋಧ ನಿಲ್ಲಿಸಿದಾಗ ಕೇರಳದ ಅರ್ಜುನ್ ಕುಟುಂಬ ಮತ್ತು ಶಾಸಕರ ದುಗುಡ ಹೆಚ್ಚಾಯಿತು. ಸ್ವತಃ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದಾಗ ಮತ್ತೇನು ಮಾಡುವುದು ಎಂಬ ಚಿಂತೆ ಕಾಡಿತು.
ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಆಗಮಿಸಿದಾಗ ಜಿಲ್ಲಾಧಿಕಾರಿ ಮತ್ತು ಶಾಸಕ ಮಾಂಕಾಳ್ ವೈದ್ಯ ಅವರಿಗೆ ಮಾಹಿತಿ ನೀಡಿದರು. ಕಾರ್ಯಾಚರಣೆ ಜಟಿಲತೆ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ಮಂಕಾಳ್ ವೈದ್ಯ ನದಿಯ ಭೀಕರತೆ ಮತ್ತು ಕಾರ್ಯಾಚರಣೆ ಸವಾಲುಗಳ ಬಗ್ಗೆ ವಿವರಿಸಿದರು. ನದಿಯ ನೀರು ಸಹಜ ಸ್ಥಿತಿಗೆ ಬಂದ ಮೇಲೆ ಹುಡುಕಾಟ ತೀವ್ರಗೊಳಿಸುವ ಬಗ್ಗೆ ಹೇಳಿದರು.
ಆದರೆ ಕೇರಳದ ಅರ್ಜುನ್ ನಾಪತ್ತೆ ವಿಷಯವನ್ನ ಸವಾಲಾಗಿ ತೆಗೆದುಕೊಂಡ ಕೇರಳದ ಶಾಸಕರು ಕಾರ್ಯಾಚರಣೆ ಸ್ಥಗಿತದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಜಿಲ್ಲಾಧಿಕಾರಿ, ಉಭಯ ರಾಜ್ಯಗಳ ಶಾಸಕರು ಸಭೆ ನಡೆಸಿ ಚರ್ಚಿಸಿದರು. ಯಾವುದೇ ಕಾರಣದಿಂದಲೂ ಕಾರ್ಯಾಚರಣೆ ಸ್ಥಗಿತಗೊಳಿಸುವಂತಿಲ್ಲ ಎಂದು ಕೇರಳ ಶಾಸಕರು ವಾದಿಸಿದರು.
ಈ ವೇಳೆ ಕೇರಳದಲ್ಲಿ ನೀರಿನಲ್ಲಿ ಕೆಲಸ ಮಾಡುವ ಯಂತ್ರವೊಂದರ ಬಗ್ಗೆ ಶಾಸಕ ಸತೀಶ್ ಸೈಲ್ ಪ್ರಸ್ತಾಪಿಸಿದರು. ನಿಮ್ಮ ಸರ್ಕಾರದ ಸಹಾಯದಿಂದ ಇಲ್ಲಿಗೆ ತರಿಸಿಕೊಡಿ. ಅದಕ್ಕೆ ಬೇಕಾಗುವ ಮೊತ್ತ ತಾನು ಮುಂಚಿತವಾಗಿ ಪಾವತಿಸುತ್ತೇನೆಂದರು. ಅದರ ಆಪರೇಟರ್ ಇಲ್ಲದ ಬಗ್ಗೆ ತಿಳಿಸಿದಾಗ ಸೈಲ್, ಸಂಬಂಧಪಟ್ಟ ಕಂಪನಿ ಎಂಜಿನಿಯರ್ ಸಂಪರ್ಕಿಸುವ ಪ್ರಯತ್ನ ಮಾಡಿದರು. ಆದರೆ ಮುಂದಿನ ಕಾರ್ಯಾಚರಣೆ ಬಗ್ಗೆ ಕೇರಳ ಶಾಸಕರು ತಮ್ಮ ಸರ್ಕಾರದೊಂದಿಗೆ ಮತ್ತೆ ಚರ್ಚೆ ಮುಂದುವರಿಸಿದ್ದಾರೆ.