ಕುಮಟಾ : ವಾಸದ ಮನೆ ಮೇಲೆ ಮರ ಬಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ಕುಮಟಾ ಪಟ್ಟಣದ ದೇವರಹಕ್ಕಲದಲ್ಲಿ ಸಂಭವಿಸಿದೆ.

ಎರಡು ದಿನಗಳಿಂದ ರಾತ್ರಿ ವೇಳೆ ಮಳೆ ಸುರಿಯುತ್ತಿದೆ. ಪರಿಣಾಮವಾಗಿ ದೇವರಹಕ್ಕಲ್ ಹೋಗುವ ರಸ್ತೆಯಲ್ಲಿದ್ದ ಅಟ್ಲಿ ಮರ ಲಲಿತಾ ನಾಯ್ಕ ಎಂಬುವವರ ಮನೆ ಮೇಲೆ ಬಿದ್ದಿದೆ. ಮರ ಬಿದ್ದಿದರಿಂದ ಮುಂಭಾಗದ ಕಟ್ಟಡ ಸಹಿತ ಮನೆ ಮುಂದೆ ನಿಲ್ಲಿಸಿದ್ದ ಅಕ್ಟಿವಾ ಸ್ಕೂಟರಿಗೂ ಹಾನಿಯಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಲಲಿತಾ ನಾಯ್ಕರು ಬಡ ಕುಟುಂಬದವರಾಗಿದ್ದು, ಪುರಸಭೆ ಅಥವಾ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳೀಯ ಪುರಸಭಾ ಸದಸ್ಯ ಎಂ. ಟಿ. ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ.