ಅಂಕೋಲಾ(ANKOLA) : ಶಿರೂರು ಗುಡ್ಡ ಕುಸಿತದ ಕಾರ್ಯಾಚರಣೆ ಮುಂದುವರಿದಿದ್ದು, ಶುಕ್ರವಾರದಂದು ಈಶ್ವರ ಮಲ್ಪೆ(ISHWAR MALPE) ತಂಡ ಶೋಧ ನಡೆಸಿತು.
ಬೆಳಿಗ್ಗೆ ಈಶ್ವರ್ ಮಲ್ಪೆ ಅವರ ಜೊತೆಗೆ ಅವರ ಸ್ನೇಹಿತರಾದ ಸ್ಟೇಫಿನ್ ಮತ್ತು ಅನಿಶ್ ಎಂಬುವವರು ಸಹ ನದಿಯ ಆಳಕ್ಕೆ ಇಳಿದು ಮೂರು ಕಡೆ ಹಗ್ಗ ಕಟ್ಟುವ ಪ್ರಯತ್ನ ಮಾಡಿದರು. ಗುಡ್ಡ ಕುಸಿತದ ಘಟನೆ ನಡೆದ ಸ್ಥಳದಲ್ಲಿ ನದಿಯಲ್ಲಿ ವ್ಯಾಪಕ ಪ್ರಮಾಣದ ಮರದ ವಸ್ತುಗಳು ಗೋಚರಿಸಿವೆ. ಇದೆ ವೇಳೆ ಬೇರೆ ವಾಹನವೊಂದರ ಕಬ್ಬಿಣದ ಭಾಗ ದೊರೆತಿದ್ದು, ಗ್ಯಾಸ್ ಟ್ಯಾಂಕರ್ ದು ಇರಬಹುದೆಂದು ಶಂಕಿಸಲಾಗಿದೆ.
ಇಂದು ಗಂಗಾವಳಿಯ ಬಣ್ಣ ಕೂಡ ಕೆಂಪಗಾಗಿದ್ದು, ಅಡಿಬದಿಯಲ್ಲಿ ಏನು ಗೋಚರಿಸುತ್ತಿಲ್ಲ. ಆದರೂ ಕೂಡ ಮುಳುಗು ತಜ್ಞರು ಸ್ಪರ್ಶದ ಮೂಲಕ ಮರವನ್ನ ಗುರುತಿಸಿದ್ದಾರೆ. ಒಂದು ಕಡೆ ಕಬ್ಬಿಣದ ಉದ್ದವಾದ ರಾಡ್ ಗೋಚರಿಸಿದೆ. ಮಧ್ಯಾಹ್ನದ ಸಂದರ್ಭದಲ್ಲಿ ಮೂರು ಕಡೆ ಹಗ್ಗ ಕಟ್ಟಿ ಮೇಲಕ್ಕೆ ಬಂದಿದ್ದರು.
ಕ್ರೇನ್ ಸಹಾಯದಿಂದ ಮರವನ್ನ ಎತ್ತಲು ಪ್ರಯತ್ನಿಸಿದಾಗ ಮರ ತುಂಡಾಯಿತು. ಆದರೂ ಸಹ ಮತ್ತೆ ಮತ್ತೆ ಮರ ಮೇಲಕ್ಕೆತ್ತುವ ಪ್ರಯತ್ನ ಮುಂದುವರಿದಿದೆ.
ಸ್ಥಳಕ್ಕೆ ಕಾರವಾರ ಶಾಸಕ ಸತೀಶ್ ಸೈಲ್ ಆಗಮಿಸಿ ಪರಿಶೀಲನೆ ನಡೆಸಿದರು. ತೆರವು ಕಾರ್ಯಾಚರಣೆಯಲ್ಲಿ ನಿರತರಾದ ಈಶ್ವರ್ ಮಲ್ಪೆ ತಂಡಕ್ಕೆ ಸ್ಥೈರ್ಯ ತುಂಬಿದರು. ಬೆಳಿಗ್ಗೆ ನದಿಯಲ್ಲಿ ಸಹಾಯಕ್ಕೆ ಬಂದಿದ್ದ ನೇವಿ ದೋಣಿಗಳು ಸಂಜೆ ವೇಳೆ ನದಿಯಲ್ಲಿ ಕಾಣಿಸಿಲ್ಲ. ಆದರೆ ಸ್ಥಳೀಯ ಮೀನುಗಾರರು ತಮ್ಮ ತಮ್ಮ ದೋಣಿಗಳ ಮೂಲಕ ಈಶ್ವರ್ ಮಲ್ಪೆ ತಂಡಕ್ಕೆ ಸಹಕಾರ ನೀಡುತ್ತಿವೆ. ಕಾರ್ಯಾಚರಣೆ ಮುಂದುವರಿದಿದೆ.