ಅಂಕೋಲಾ: ಶಾಲಾ ಕೊಠಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿಯಾದ ಘಟನೆ ತಾಲೂಕಿನ ಹೊನ್ನಳಿ ಗ್ರಾಮದಲ್ಲಿ ಸಂಭವಿಸಿದೆ.
ಹೊನ್ನಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲ್ಲಿ ನಂತರ ತೀವ್ರವಾಗಿ ಹೊತ್ತು ಉರಿದಿದೆ. ಶಾಲೆಯಲ್ಲಿನ ಕಪಾಟುಗಳು ಮತ್ತು ಪ್ರಯೋಗಾಲಯದ ಸಾಮಗ್ರಿಗಳಿಗೆ ಬೆಂಕಿಗಾಹುತಿಯಾಗಿದೆ. ಪ್ರಯೋಗಾಲಯದ ಸಾಮಗ್ರಿಗಳ ಜೊತೆಯಲ್ಲಿ ಶಾಲಾ ದಾಖಲೆಗಳು ಸುಟ್ಟು ಹೋಗಿವೆ.
ಬೆಂಕಿ ತಗುಲಿದ್ದನ್ನು ಗಮನಿಸಿದ ಗ್ರಾಮಸ್ಥರು ಸ್ಥಳೀಯ ಬಾವಿಯ ನೀರನ್ನು ಬಳಸಿಕೊಂಡು ಬೆಂಕಿ ಆರಿಸಲು ಹರಸಾಹಸ ಪಟ್ಟರು. ಘಟನೆಯನ್ನು ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಶಾಲೆಯ ಆವರಣದಲ್ಲಿ ನೆರದಿದ್ದರು.
ಶಾಲೆಯ ಪ್ರಯೋಗಾಲಯದ ಕೊಠಡಿಯ ಮೂಲಕ ಬೆಂಕಿ ತಗಲಿರಬಹುದು. ಅಲ್ಲಿನ ರಾಸಾಯನಿಕಗಳಿಂದ ಹೊತ್ತಿ ಉರಿದಿರಬಹುದಾದ ಸಾಧ್ಯತೆಗಳಿವೆ ಎಂದು ಸ್ಥಳೀಯರು ಹೇಳಿದ್ದಾರೆ.