ಧಾರವಾಡ : ಸರ್ಕಾರಿ ಬಸ್ ಚಾಲಕ ಛತ್ರಿ ಹಿಡಿದು ಡ್ರೈವ್ ಮಾಡಿದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದರಿಂದ ಸರ್ಕಾರದ ಬಗ್ಗೆ ಬಾರೀ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಬಸ್ ಪರಿಶೀಲನೆ ನಡೆಸಲಾಗಿದೆ.

ಆದ್ರೆ ಅಸಲಿಗೆ ಬಸ್ ನಲ್ಲಿ ನಡೆದಿದ್ದೇನು ಎಂಬುದರ ಬಗ್ಗೆ ಸಾರಿಗೆ ಸಂಸ್ಥೆಯ ಸ್ಪಷ್ಟನೆ ನೀಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಸಾರಿಗೆ ಸಂಸ್ಥೆಯ ದಿನಾಂಕ: 23- 05-2024 ರಂದು ಧಾರವಾಡ ಘಟಕದ ವಾಹನ ಸಂಖ್ಯೆ ಕೆಎ-25 ಎಫ್-1336 ಉಪ್ಪಿನಬೆಟಗೇರಿಯಿಂದ ಧಾರವಾಡ ಮಾರ್ಗದಲ್ಲಿ ಕಾರ್ಯಾಚರಿಸುತ್ತಿರುವಾಗ ವಾಹನದಲ್ಲಿ ಚಾಲಕರಾಗಿ ಶ್ರೀ ಹನುಮಂತಪ್ಪ ಅ ಕಿಲ್ಲೇದಾರ, ಬಿ.ಸಂ-1203 D ಹಾಗೂ ನಿರ್ವಾಹಕರಾಗಿ ಶ್ರೀಮತಿ ಅನಿತಾ ಎಚ್. ಬಿ ಸಂ-396 ರವರು ಕರ್ತವ್ಯ ನಿರ್ವಹಿಸುತ್ತಿದ್ದರು.
ಮಳೆ ಬರುತ್ತಿದ್ದ ಆ ಸಮಯದಲ್ಲಿ ಅಂದರೆ ಸುಮಾರು 04:30 ಕ್ಕೆ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಇದ್ದುದರಿಂದ ಚಾಲಕರು ಮನೋರಂಜನೆಗಾಗಿ ನಿರ್ವಾಹಕರ ಬಳಿ ಇದ್ದ ಕೊಡೆಯನ್ನು ಪಡೆದು, ಹಿಡಿದುಕೊಂಡು ವಾಹನ ಚಾಲನೆ ಮಾಡಿರುತ್ತಾರೆ. ಇದನ್ನು ಸದರಿ ನಿರ್ವಾಹಕಿಯು ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ. ಆ ಸಮಯದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ (Roof Leakage) ಇರಲಿಲ್ಲ ಎಂದು ತಿಳಿದುಬಂದಿರುತ್ತದೆ.

ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿರುವುದಿಲ್ಲ. ಸದರಿ ವಾಹನವನ್ನು ವಿಭಾಗದ ತಾಂತ್ರಿಕ ಶಿಲ್ಪಿಗಳಿಂದ ಪರಿಶೀಲನೆ ಮಾಡಲಾಗಿ ಮೇಲ್ಟಾವಣಿಯು ಸೋರದೆ ಇರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಈ ಕುರಿತು ಸದರಿ ಚಾಲನಾ ಸಿಬ್ಬಂದಿಗಳಿಂದ ಸ್ಪಷ್ಟಿಕರಣ ಪಡೆಯಲಾಗಿ ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣವಾಗಿರುತ್ತದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಚಾಲಕ ಹನುಮಂತಪ್ಪ ಕಿಲ್ಲೆದಾರ ಮತ್ತು ಅನಿತಾ ಅವರ ಮೇಲೆ ಶಿಸ್ತು ಕ್ರಮಕ್ಕೆ ಸಂಸ್ಥೆ ಮುಂದಾಗಿದೆ.