ಉಡುಪಿ :  ಮಧ್ಯರಾತ್ರಿ ನಗರದಲ್ಲಿ ಎರಡು ಗುಂಪುಗಳ ನಡುವೆ   ಗ್ಯಾಂಗ್ ವಾರ್ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಥೇಟ್ ಸಿನೆಮಾದಂತೆ ಇದೆ ಈ ದೃಶ್ಯ.

ಕಾಪು ಮೂಲದ ಗರುಡ ಗ್ಯಾಂಗ್ ನಿಂದ ಮೇ 18 ರ ರಾತ್ರಿ ಗ್ಯಾಂಗ್ ವಾರ್ ನಡೆದಿದೆ. ಪ್ರಕಾರಣಕ್ಕೆ ಸಂಭಂಧಿಸಿದಂತೆ ಗರುಡ ಗ್ಯಾಂಗ್ ನ ಕಾಪು ಮೂಲದ ಆಶಿಕ್ ಮತ್ತು ಗುಜ್ಜರಾಬೆಟ್ಟುದ ರಾಕೀಬ್ ಸೇರಿ ಒಟ್ಟು ಮೂವರಿಗೆ  ಪೊಲೀಸರು ಮುದ್ದೆ ತಿನ್ನಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾದ ಉಳಿದವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಅಲ್ಲದೆ  ಪ್ರಕರಣಕ್ಕೆ ಬಳಸಲಾದ ಎರಡು ಕಾರು, ಬೈಕ್ , ತಲವಾರು ಮತ್ತು ಡ್ಯಾಗರ್ ವಶಕ್ಕೆ ಪಡೆದಿದ್ದಾರೆ.

ಘಟನೆ ನಡೆದಿದ್ದೇನು? : ಕಾರು ಮಾರಾಟದ ವಿಚಾರದಲ್ಲಿ ಮೇ 18ರಂದು ರಾತ್ರಿ ಎರಡು ತಂಡಗಳು ಉಡುಪಿ ನಗರದಲ್ಲಿ ಹೊಡೆದಾಡಿಕೊಂಡು ಪರಸ್ಪರ ತಲವಾರ ಝಳಪಿಸಿದೆ. ಬ್ಲಾಕ್ ಎಂಡ್ ವೈಟ್ ಬಿಳಿ  ಕಾರ್‌ಗಳಲ್ಲಿದ್ದ ಎರಡು ತಂಡಗಳು ರಸ್ತೆ ಮಧ್ಯದಲ್ಲಿ ಜಗಳ ಮಾಡಿಕೊಂಡಿದ್ದು,  ಗಲಾಟೆ ತಾರಕಕ್ಕೇರಿ ಕಾರ್‌ನಿಂದ ಇನ್ನೊಂದು ಕಾರ್‌ಗೆ ಢಿಕ್ಕಿ ಹೊಡೆಸಿಕೊಂಡಿವೆ.  ಒಂದು ಗ್ಯಾಂಗ್‌ನ  ಸದಸ್ಯನೋರ್ವ ಮತ್ತೊಂದು ತಂಡದ ಮೇಲೆ ತಲವಾರ್ ಬೀಸಿದ್ದಾನೆ. ಆತ ಬೀಸಿದ ತಲವಾರ್  ಮತ್ತೊಂದು ಕಾರ್‌ಗೆ ಬಿದ್ದು  ಗಾಜು ಪುಡಿಯಾಗಿದೆ.

ಬಳಿಕ ಮತ್ತೊಂದು ಗ್ಯಾಂಗ್ ಕಾರು ಮುಂದಕ್ಕೆ ಚಲಾಯಿಸಿ ವಾಪಸ್ ಬಂದು ಮತ್ತೆ ಎದುರಾಳಿಯ ಗ್ಯಾಂಗ್‌ನ ಕಾರ್‌ಗೆ ಗುದ್ದಿದೆ. ಅಷ್ಟೇ ಅಲ್ಲದೇ ವೇಗವಾಗಿ ಕಾರ್ ಚಲಾಯಿಸಿ ಆ ಗ್ಯಾಂಗ್‌ನ ಸದಸ್ಯನೊಬ್ಬನ ಮೇಲೆ ಕಾ‌ರ್ ಹಾಯಿಸಲಾಗಿದೆ. ಕಾರ್ ಹರಿದು  ನಡು ರಸ್ತೆಯಲ್ಲಿ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

ಗ್ಯಾಂಗ್‌ವಾರ್‌ನ ವಿಡಿಯೋ ವೈರಲ್ ಆಗಿದ್ದು, ಉಡುಪಿ ನಗರ ಸೇರಿದಂತೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಒಂದೇ ಸಮುದಾಯಕ್ಕೆ ಸೇರಿದ ಎರಡು ಗುಂಪಿನ ಗ್ಯಾಂಗ್ ವಾರ್ ಆಗಿದ್ದು ಕಾರು ಮಾರಾಟದ ವಿಚಾರದಲ್ಲಿ ನಡು ರಸ್ತೆಯಲ್ಲಿ ಈ  ಗಲಾಟೆ ನಡೆದಿದೆ ಎನ್ನಲಾಗಿದೆ. ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡವರ ಶೋಧ ನಡೆಸಿದ್ದಾರೆ.