ಕುಮಟಾ : ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಮದುವೆಯಾಗೋಕೆ ಹೊರಟಿರೋದನ್ನ ಕಂಡು ಕ್ರೋದಗೊಂಡ ಮಾಜಿ ಲವರ್ ಚಾಕುವಿನಿಂದ ಇರಿದ ಘಟನೆ ಕುಮಟಾದಲ್ಲಿ ನಡೆದಿದೆ.

ಪಟ್ಟಣದ ಮಣಕಿ ಮೈದಾನದ ಸಮೀಪ ಈ ಘಟನೆ ನಡೆದಿದ್ದು, ಚೂರಿ ಇರಿತಕ್ಕೊಳಗಾದವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕುಮಟಾ ತಾಲೂಕಿನ ಹೆಗಡೆ ಚಿಟ್ಟಿಕಂಬಿ ಗ್ರಾಮದ ನಿವಾಸಿ ರಾಜೇಶ ರಮೇಶ ಅಂಬಿಗ (27)  ಹಲ್ಲೆ ಮಾಡಿದ ಆರೋಪಿ. ಕುಮಟಾ ದುಂಡಕುಳಿಯ ಸಂತೋಷ ಪಾಂಡುರಂಗ ಅಂಬಿಗ (27) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ. ರಾಜೇಶ ಅಂಬಿಗ ಮೊದಲು ಹೆಗಡೆ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ, ಆತನ ವರ್ತನೆ ಸರಿಯಿಲ್ಲದಿದ್ದರಿಂದ ಆಕೆ ಈತನಿಂದ ದೂರವಾಗಿದ್ದಳು. ಬಳಿಕ ದುಂಡಕುಳಿಯ ಸಂತೋಷನ ಜತೆ ಪ್ರೇಮಂಕುರವಾಗಿ ಮದುವೆ ನಿಶ್ಚಿತಾರ್ಥವಾಗಿತ್ತು ಎನ್ನಲಾಗಿದೆ.

ವಿಷಯ ಗೊತ್ತಾಗಿ  ರಾಜೇಶ ಕ್ರೋಧಗೊಂಡಿದ್ದ. ಇಂದು ಸಂತೋಷನಿಗೆ ಕಾಲ್ ಮಾಡಿ ಕುಮಟಾದ ಮಣಕಿ ಮೈದಾನದ ಲೈಬ್ರರಿ ಹತ್ತಿರ ಬರಲು ಹೇಳಿದ್ದಾನೆ. ಅಲ್ಲಿಗೆ ಬಂದ  ಸಂತೋಷನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಕುತ್ತಿಗೆಗೆ ತಿವಿದಿದ್ದಾನೆ.
ಇನ್ನೊಮ್ಮೆ ಸಿಕ್ಕಾಗ ಕೊಲೆ ಮಾಡಿ ನಾಪತ್ತೆ ಮಾಡುವುದಾಗಿ ರಾಜೇಶ್ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.