ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar): ಇಲ್ಲಿನ ತಾಲೂಕಿನ ಮುದ್ಗಾ(Mudga) ಮೀನುಗಾರಿಕಾ ಬಂದರಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ದುರಂತದಲ್ಲಿ, ಬೋಟ್‌ನ ಕೋಲ್ಡ್ ಸ್ಟೋರೇಜ್‌ನಲ್ಲಿದ್ದ ಮೀನು ಖಾಲಿ ಮಾಡುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟು, ಮತ್ತೊಬ್ಬರು ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದೆ.

ಬೆಳಿಗ್ಗೆ ಸುಮಾರು 06:30 ಗಂಟೆಯ ವೇಳೆಗೆ ಮುಕಾಂಬಿಕಾ ಹೆಸರಿನ ‘ಪರ್ಷಿಯನ್’ ಮಾದರಿಯ ಮೀನುಗಾರಿಕಾ ಬೋಟ್ (ಸಂಖ್ಯೆ: KA-02MM-6301) ಮುದ್ಗಾ ಬಂದರಿನಲ್ಲಿ ಲಂಗರು ಹಾಕಿತ್ತು. ಬೋಟ್‌ನ ಸ್ಟೋರೇಜ್ ಟ್ಯಾಂಕ್‌ನಲ್ಲಿದ್ದ ಚಮನ್ ಜಾತಿಯ ಮೀನನ್ನು ಹೊರ ತೆಗೆಯಲು ಇಳಿದಾಗ ಈ ದುರಂತ ಸಂಭವಿಸಿದೆ.

ಒರಿಸ್ಸಾ ಮೂಲದ ​ಪುರಂದರ ಬಿಸರಾ (21 ), ​ಆಕಾಶ್ ನಾಯ್ಕ್ (24 ) ದುರಂತದಲ್ಲಿ ಮೃತಪಟ್ಟವರೆಂದು ಹೇಳಲಾಗಿದೆ. ಲಾಲಿಂದರ ಧ್ರುವ (41) ತೀವ್ರ ಚಿಕಿತ್ಸಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗಿದೆ.

​ಸ್ಟೋರೇಜ್‌ನೊಳಗೆ ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದ ಮೂವರನ್ನೂ ತಕ್ಷಣವೇ ಬೆಲೆಕೇರಿ (ಅಂಕೋಲಾ) ನಿವಾಸಿ ಸಚಿನ್ ಕೃಷ್ಣ ಖಾರ್ವಿ ಎಂಬುವವರು ಕಾರವಾರದ ಕ್ರಿಮ್ಸ್ (KRIMS) ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಅಂತಿಮ ಉಸಿರೆಳೆದಿದ್ದು, ಲಾಲಿಂದರ ಧ್ರುವ ಅವರ ಸ್ಥಿತಿ ಗಂಭೀರವಾಗಿದ್ದು ತೀವ್ರ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಸ್ಥಳಕ್ಕೆ ಕಾರವಾರ (Karwar) ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.