ಭಟ್ಕಳ: ಪ್ರಸಿದ್ಧ ಧಾರ್ಮಿಕ ಸ್ಥಳ, ಶಕ್ತಿ ಕ್ಷೇತ್ರ ಜಗನ್ಮಾತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ಕಾರ್ಯಕ್ರಮ ಶನಿವಾರದಿಂದ ಆರಂಭವಾಗಿದೆ.
ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಮಾರ್ಗದರ್ಶನ, ಉಪಸ್ಥಿತಿಯಲ್ಲಿ ಹನ್ನೊಂದು ದಿನಗಳ ಕಾಲ ವಿಜೃಂಭಣೆಯಿಂದ ಜರುಗುತ್ತಿದೆ. ದುರ್ಗಾಪರಮೇಶ್ವರಿ ದೇವಿ ನಂಬಿ ಪೂಜಿಸಿದರೆ ಕಷ್ಟ ಕಾರ್ಪಣ್ಯ ದೂರ ಮಾಡುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿಯೇ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಿ ಭಕ್ತರ ಪಾಲಿನ ಅಧಿದೇವತೆಯಾಗಿದ್ದಾಳೆ. ಇಂದಿನಿಂದ ಆರಂಭಗೊಳ್ಳುವ ಶ್ರೀ ದೇವಿಯ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವನ್ನು ಅದ್ಧೂರಿಯಾಗಿ ಅಚರಿಸಲು ಭಕ್ತರು ಸಿದ್ದರಾಗಿದ್ದು , ಅಳ್ವೆಕೋಡಿಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಪುರಾಣ ಪ್ರಸಿದ್ಧ ಕ್ಷೇತ್ರದ ಹಿನ್ನೆಲೆ : ಸುಮಾರು ಮೂರು ಶತಮಾನಗಳ ಹಿಂದೆ ಇಲ್ಲಿನ ಅಳಿವೆ ತೀರದ ಸಮೀಪ ಕೇದಿಗೆ ಹೂವಿನ ಹಿಂಡು ಸಾಕಷ್ಟು ಬೆಳೆದುಕೊಂಡಿತ್ತು. ದನ, ಕರುಗಳಿಗೆ ಕೇದಿಗೆ ಹಿಂಡು, ಗಿಡಗಂಟಿಗಳೇ ನೆರಳನ್ನು ನೀಡುವ ತಾಣವಾಗಿತ್ತು. ಕೇದಿಗೆ ಹಿಂಡಿನ ಒಳಗೆ ನಿತ್ಯ ಹಸುವೊಂದು ಪ್ರವೇಶಿಸಿ ಹಿಂದಿರುಗುತ್ತಿದ್ದುದನ್ನು ಕಂಡ ಊರಿನ ಹಿರಿಯರೊಬ್ಬರು ಆ ಹಸುವನ್ನು ಹಿಂಬಾಲಿಸಿ ಹೋಗಿದ್ದರಂತೆ. ದೂರದಲ್ಲಿ ನಿಂತ ಅವರಿಗೆ ಹಸು ಕೇದಿಗೆ ಹಿಂಡಿನ ಪೊದೆಗೆ ಹಾಲುಣಿಸುತ್ತಿರುವುದು ಗೋಚರಿಸುತ್ತದೆ. ಹಸುವಿನ ಬಗ್ಗೆ ಕುತೂಹಲ ಇಮ್ಮಡಿಯಾಗುತ್ತದೆ. ಮಾರನೆಯ ದಿನ ಸಹ ಹಸು ಕೇದಿಗೆ ಹಿಂಡಿನೊಳಗೆ ಹೋಗಿ ಹಾಲುಣಿಸಿ ಹೊರ ಬಂತು ಕುತೂಹಲದಿಂದ ಊರಿನ ಹಿರಿಯರು ಹಿಂಡಿನ ಒಳಕ್ಕೆ ಹೋಗಿ ನೋಡಿದರೆ ಹಸುವು ದೇವಿಯ ವಿಗ್ರಹವೊಂದಕ್ಕೆ ಹಾಲೆರೆಯುತ್ತಿರುವುದು ಕಾಣಿಸುತ್ತದೆ. ಹಸು ಹಾಲೆರೆಯುತ್ತಿರುವ ಸುದ್ದಿ ಗ್ರಾಮದಲೆಲ್ಲಾ ಅವರಿಸಿ ದೇವಿಯ ಮಹಿಮೆ ಎಲ್ಲರಿಗೂ ತಿಳಿಯುತ್ತೆ. ಆಗ ಹಸು ಹಾಲೆರೆಯುತ್ತಿದ್ದ ಸ್ಥಳದಲ್ಲಿ ಸಣ್ಣದಾದ ಗುಡಿ ನಿರ್ಮಾಣವಾಗಿತ್ತು.
ವರ್ಷಗಳು ಕಳೆದಂತೆ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಯಿತು. 1961ರಲ್ಲಿ ಶ್ರೀ ದುರ್ಗಾಪರಮೇಶ್ವರಿ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿತು. ದೇವಿಯ ಸರ್ವ ಭಕ್ತರ ಇಚ್ಛೆಯಂತೆ 1962ರಲ್ಲಿ ದೇವಾಲಯ ಕಟ್ಟಡಕ್ಕೆ ಶಂಕು ಸ್ಥಾಪನೆ ಕಾರ್ಯ ನೆರವೇರಿತು. ಊರ ಭಕ್ತರಿಂದ ಸಹಕಾರ, ದೇಣಿಗೆ ನಿರಂತರವಾಗಿ ಹರಿದು ಬಂದ ಪರಿಣಾಮವಾಗಿ 12 ವರ್ಷಗಳ ನಂತರ ಅಂದರೆ 1974, ಏಪ್ರಿಲ್ 25ರಂದು ಭವ್ಯವಾದ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಲೋಕಾರ್ಪಣೆಗೊಂಡಿತು.
ಈಗ 50 ವರ್ಷಗಳು ಕಳೆದಿದ್ದರಿಂದ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಶ್ರೀ ದೇವರ ಪುನರ್ ಪ್ರತಿಷ್ಠೆ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಕ್ರಾಂತಿಗೆ ನಾಂದಿ : ಶಿಥಿಲಾವಸ್ಥೆಯಲ್ಲಿದ್ದ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಕಾವಲಿಗೆ ನಿಂತಿರುವ ಬೇಟೆವೀರ (2000ರಲ್ಲಿ), ಗಡಿವೀರ ಮಹಾಸತಿ (2003), ಹಿಂಡುಚರಿ ಮಹಾಸತಿ ದೇವಾಲಯ (2003) ಪುನರ್ ಪ್ರತಿಷ್ಠಾ ಕಾರ್ಯಗಳು ವಿಜೃಂಭಣೆಯಿಂದಲೇ ನೆರವೇರಿದವು. ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅಭಿವೃದ್ಧಿ ಎನ್ನುವುದು ಅಳಿವೇಕೋಡಿ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೂ ನಾಂದಿ ಹಾಡಿತು. 1992ರಲ್ಲಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಸ್ಥಾಪನೆಯಾಯಿತು. ಭಕ್ತರ ಸಹಕಾರದಿಂದಲೇ ಕಟ್ಟಿದ ಬೃಹತ್ ಸಭಾಭವನ 2006ರಲ್ಲಿ ಲೋಕಾರ್ಪಣೆಗೊಂಡಿತು. ದೇವಸ್ಥಾನದ ಆವರಣದಲ್ಲಿಯೇ ನಿರ್ಮಾಣವಾದ ಸುಂದರ ಶ್ರೀ ದುರ್ಗಾಪರಮೇಶ್ವರಿ ಅತಿಥಿಗೃಹ ಮತ್ತು ನಿತ್ಯ ಅನ್ನಪೂರ್ಣ ಸಭಾಭವನ 2010ರಲ್ಲಿ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಉದ್ಘಾಟನೆಗೊಂಡಿತು. ಇಲ್ಲಿನ ಇನ್ನೂ ಒಂದು ವಿಶೇಷ ತಿಮ್ಮಪ್ಪ ನಾರಾಯಣ ಹೊನ್ನಿಮನೆ ಅಧ್ಯಕ್ಷತೆಯಲ್ಲಿ 2014ರಲ್ಲಿ ಸ್ಥಾಪನೆಯಾದ ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ ಪ್ರತಿ ವರ್ಷ ಭಟ್ಕಳ ತಾಲೂಕಿನ ಎಲ್ಲ ಸಮಾಜದ 90ಶೇ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿದೆ. 2021ರಲ್ಲಿ ಸ್ಥಾಪನೆಯಾದ ಶ್ರೀ ದುರ್ಗಾಪರಮೇಶ್ವರಿ ಧರ್ಮಾರ್ಥ ಕಲ್ಯಾಣ ಮಂಟಪ ಆರ್ಥಿಕವಾಗಿ ದುರ್ಬಲರಾದ ಜನರ ವಿವಾಹ ಕಾರ್ಯಗಳಿಗೆ ಆಶ್ರಯ ತಾಣವಾಗಿ ಪ್ರಸಿದ್ಧಿಯನ್ನು ಪಡೆದಿದೆ.
ಇಂದಿನಿಂದ ಸುವರ್ಣ ಮಹೋತ್ಸವದ ಸಂಭ್ರಮ : ಶಕ್ತಿ ಕ್ಷೇತ್ರವಾದ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಪುರಾತನ ಜಾಗೃತ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ಜೂನ್ 29 ರಿಂದ ಜುಲೈ 9ರ ತನಕ ವಿಜ್ರಂಭಣೆಯಿಂದ ನಡೆಯಲಿದೆ.
29 ರಂದು ಸಂಜೆ 7 ಗಂಟೆಗೆ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಆಗಮಿಸಲಿದ್ದು, ಶ್ರೀಗಳಿಂದ ಆಶೀರ್ವಚನ, ಪಾದ ಪೂಜೆ ನಡೆಯಲಿದೆ. ಜೂ. 30 ರಂದು ಶ್ರೀಗಳ ಅಮೃತ ಹಸ್ತದಿಂದ ಶಿಖರ ಕಲಶ ಪ್ರತಿಷ್ಠಾಪನೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜು.1 ರಂದು ಶತಚಂಡಿಕಾಯಾಗ ಆರಂಭ, ಲಕ್ಷ ಕುಂಕುಮಾರ್ಚನೆ ನಡೆಯಲಿದೆ. ಜುಲೈ 7ರವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ನೂತನ ಯಜ್ಞಮಂಟಪ ಉದ್ಘಾಟನೆ, ಗೋಪುರಕ್ಕೆ ತಾಮ್ರದ ಹೊದಿಕೆ, ಶ್ರೀ ಸೂಕ್ತ ಹವನ, ಶ್ರೀ ಪಂಚದುರ್ಗಾ ಹವನ, ಶ್ರೀ ಲಕ್ಷ ಕಂಕುಮಾರ್ಚನೆ, ಶ್ರೀ ದುರ್ಗಾನಮಸ್ಕಾರ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಮಹಾ ಅನ್ನಸಂತರ್ಣಣೆ ನಡೆಯಲಿದೆ . ಕಾರ್ಯಕ್ರಮದ ಅಂಗವಾಗಿ ಜು.7 ಮತ್ತು 8 ರಂದು ಸಂಜೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ಗೌರವಾರ್ಪಣೆ ನಡೆಯಲಿದೆ.
ದೇವಸ್ಥಾನದ ಧರ್ಮದರ್ಶಿಗಳಾದ ತಿಮ್ಮಪ್ಪ ಹೊನ್ನಿಮನೆ, ನಾರಾಯಣ ದೈಮನೆ, ಹನುಮಂತ ನಾಯ್ಕ, ಅರವಿಂದ ಪೈ, ಮಾರಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಎಂ ಮೊಗೇರ ಮತ್ತು ಆಡಳಿತ ಮಂಡಳಿಯ ಸದಸ್ಯರು ಉತ್ಸವಕ್ಕೆ ಸಕಲ ಸಿದ್ಧತೆ ನಡೆಸಿದ್ದು, ತಾಲ್ಲೂಕು ಸೇರಿದಂತೆ ವಿವಿಧ ಭಾಗದ ಅಸಂಖ್ಯಾತ ಭಕ್ತರು ಪಾಲ್ಗೊಳ್ಳಲಿದ್ದಾರೆ.