ಭಟ್ಕಳ(BHATKAL): ತಾಲೂಕಿನ ಗ್ರಾಮೀಣ ಭಾಗದಲ್ಲಿ ಜನರ ಆರಾಧ್ಯ ದೈವ ಮಾರಿ ಜಾತ್ರೆ (MARI JAATRE) ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ.
ಇಂದು ಬೆಳಿಗ್ಗೆಯೇ ಮಾರಿಕಾಂಬಾ ದೇಗುಲದಲ್ಲಿ ಮಾರಿಯಮ್ಮನ ಪ್ರತಿಷ್ಠಾಪಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು ಇಂದು (ಜುಲೈ 31)ಬುಧವಾರ ಮತ್ತು ನಾಳೆ (ಆಗಸ್ಟ್ 1ರಂದು) ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ.
ನಿನ್ನೆ ತಡರಾತ್ರಿಯವರೆಗೂ ವಿಶ್ವಕರ್ಮ (VISHWAKARMA) ಸಮಾಜದವರು ತವರು ಮನೆಯ ವಿಶೇಷ ಪೂಜೆಯನ್ನು ನೆರವೇರಿಸಿದರು. ನಂತರ ಮೂರ್ತಿಗೆ ವಿಶ್ವಕರ್ಮ ಮಹಿಳೆಯರಿಂದ ಸುಹಾಸಿನಿ ಪೂಜೆ, ಷೋಡಶೋಪಚಾರ, ಮಹಾಮಂಗಳಾರತಿ ನಡೆಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳು, ಊರಿನ ಭಕ್ತರು ಪಾಲ್ಗೊಂಡಿದ್ದರು.
ಬೆಳಿಗ್ಗೆ ಮಾರಿ ದೇವಿಯನ್ನು ಭಕ್ತರು ಸುರಿಯುತ್ತಿರುವ ಮಳೆಯಲ್ಲೇ ಮೆರವಣಿಗೆಯ ಮೂಲಕ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಕರೆತಂದು ಗದ್ದುಗೆಯಲ್ಲಿ ಪ್ರತಿಷ್ಟಾಪಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಭಕ್ತರ ಜಯಘೋಷ, ಚಂಡೆ ವಾದ್ಯ ಜಾತ್ರೆಯ ನಾಂದಿಗೆ ಕಳೆಕಟ್ಟಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಇಂದಿನಿಂದ ಭಕ್ತರಿಗಾಗಿ ದೇವಿಯ ದರ್ಶನ, ಪೂಜಾ ಸೇವೆ, ಹರಕೆ ಸೇವೆ ಆರಂಭಗೊಂಡಿದೆ. ದೇವಿಯ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ನಾಳೆ ಗುರುವಾರ ಸಂಜೆ ನಾಲ್ಕುವರೇ ಸುಮಾರಿಗೆ ಮಾರಿಯಮ್ಮನನ್ನ ಭಕ್ತರು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಕೊಂಡೋಯ್ಯಲಿದ್ದಾರೆ. ಜಾಲಿಕೋಡಿ ಸಮುದ್ರದಲ್ಲಿ ತೀರಕ್ಕೆ ಕೊಂಡೋಯ್ದು ವಿಸರ್ಜನೆ ಮಾಡಲಿದ್ದಾರೆ.