ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ಆನ್‌ಲೈನ್ ಪಾವತಿಯ ನಕಲಿ ಆ್ಯಪ್ ಬಳಸಿ ವ್ಯಾಪಾರಿಯೋರ್ವರಿಗೆ ವಂಚಿಸಿದ ಪ್ರಕರಣ ಗೊತ್ತಾಗಿದೆ.
ಕುಮಟಾದ(Kumta) ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ‘ಮಾತೋಶ್ರೀ ಏಜೆನ್ಸೀಸ್’ ಎಂಬ ಮೊಬೈಲ್ ಶೋರೂಮ್‌ಗೆ ಗ್ರಾಹಕನ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ಫೋನ್ ಪೇ (PhonePe) ಮೂಲಕ ಹಣ ಪಾವತಿಸಿರುವುದಾಗಿ ನಕಲಿ ಮೆಸೇಜ್ ತೋರಿಸಿ ವಂಚಿಸಿ ಕಾಲ್ಕಿತ್ತಿದ್ದಾನೆ.
ಸೆಪ್ಟೆಂಬರ್ 10 ರಂದು ಮಧ್ಯಾಹ್ನ 2:50 ರ ಸುಮಾರಿಗೆ ಅಂಗಡಿಗೆ ಬಂದಿದ್ದ ಈ ಖದೀಮ, 16,700 ರೂ. ಬೆಲೆಬಾಳುವ ರಿಯಲ್ ಮಿ (Realme) ಕಂಪನಿಯ C-100 X (ಡೀಪ್ ಬ್ಲೂ ಬಣ್ಣ, 4GB+64GB) ಮೊಬೈಲ್ ಫೋನ್ ಅನ್ನು ಖರೀದಿಸಿದ್ದ. ಬಳಿಕ ಬಿಲ್ ಪಾವತಿಸಲು ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿದಂತೆ ನಟಿಸಿ, 16,700 ರೂ. ಯಶಸ್ವಿಯಾಗಿ ಪಾವತಿಯಾಗಿರುವ ನಕಲಿ ಸ್ಕ್ರೀನ್‌ಶಾಟ್ ಮೆಸೇಜ್ ಅನ್ನು ಅಂಗಡಿ ಮಾಲೀಕನಿಗೆ ತೋರಿಸಿದ್ದಾನೆ. ಹಣ ತಮ್ಮ ಖಾತೆಗೆ ಜಮೆಯಾಗಿರುವ ಬಗ್ಗೆ ಮಾಲೀಕರು ಖಚಿತಪಡಿಸಿಕೊಳ್ಳುವ ಮುನ್ನವೇ ಆತ ಮೊಬೈಲ್(Mobile) ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ತಾನು ಮೋಸ ಹೋಗಿದ್ದು ಅರಿವಿಗೆ ಬರುತ್ತಿದ್ದಂತೆ ಅಂಗಡಿಯ ಮಾಲೀಕ ಕೂಜಳ್ಳಿ ನಿವಾಸಿ ಧನಂಜಯ ಮಂಜುನಾಥ ನಾಯ್ಕ (27) ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ(Kumta Police Station) ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ವಂಚಕನ ಪತ್ತೆಗಾಗಿ ಆಸುಪಾಸಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದ್ದಾರೆ.
ಕಳೆದ ಕೆಲ ದಿನಗಳಿಂದ ಹಲವೆಡೆ ಡಿಜಿಟಲ್ ವಂಚನೆಗಳು(Digital Cheating) ಹೆಚ್ಚುತ್ತಿದ್ದು, ಅಂಗಡಿ ಮಾಲೀಕರು ವ್ಯಾಪಾರದಲ್ಲಿ ವಂಚನೆಗೊಳಗಾಗುತ್ತಿದ್ದು ಎಚ್ಚರ ವಹಿಸಬೇಕಾಗಿದೆ.