ಕಾರವಾರ(KARWAR) : ರಾಷ್ಟ್ರೀಯ ಹೆದ್ದಾರಿ 66 (NH66)ರಲ್ಲಿರುವ ಕಾಳಿ ನದಿಯಲ್ಲಿರುವ ಹೊಸ ಸೇತುವೆ ಬಗ್ಗೆ ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಗುರುವಾರದಿಂದ ಸೇತುವೆಯ ಕೆಳ ಭಾಗದ ವಿಡಿಯೋವೊಂದು ವೈರಲ್ ಆಗುತ್ತಿದ್ದು ಕಾರವಾರ ಸುತ್ತಮುತ್ತಲ ನಾಗರಿಕರ ಭಯಗೊಂಡಿದ್ದಾರೆ. ಈಗಾಗಲೇ ಹಳೆಯ ಸೇತುವೆ ಕುಸಿದು ಬಿದ್ದಿದ್ದರಿಂದ ನಾಗರಿಕರು ಬೆಚ್ಚಿಬಿದ್ದಿದ್ದರು. ಪ್ರಯಾಣಿಕರು, ವಾಹನ ಸವಾರರು ತಮ್ಮ ಸಂಚಾರದಲ್ಲಿ ತೊಂದರೆ ಎದುರಿಸುತ್ತಿದ್ದಾರೆ.

ಕಳೆದ ಕೆಲ ವರ್ಷಗಳ ಹಿಂದೆ ಐಆರ್ಬಿ ಕಂಪನಿ ಮಾಡಿದ ಸೇತುವೆ ಬಗ್ಗೆ ಭರವಸೆ ಇಲ್ಲ. ಹೀಗಾಗಿ ಹಳೆ ಸೇತುವೆ ಕುಸಿದಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಲ್ಲಾಡಳಿತ ಸಹ ಐಆರ್ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ನೋಟೀಸ್ ನೀಡಿತ್ತು. ಸೇತುವೆಯ ಧಾರಣಾ ಸಾಮರ್ಥ್ಯದ ಬಗ್ಗೆ ವರದಿ ನೀಡುವಂತೆ ತಿಳಿಸಿತ್ತು. ಸಂಬಂಧಪಟ್ಟವರು ವರದಿ ನೀಡಿ ಸೇತುವೆ ಸುರಕ್ಷಿತವಾಗಿದೆ. ವಾಹನಗಳ ಓಡಾಟ ನಡೆಸಬಹುದು ಎಂದಿದ್ದರು.

ಆದರೆ ಮತ್ತೆ ಸೇತುವೆ ಬಿರುಕು ಬಿಟ್ಟ ಬಗ್ಗೆ ಜನ ಮಾತಾಡಿಕೊಳ್ಳುತ್ತಿದ್ದಾರೆ. ಬಹಳ ಮುಖ್ಯವಾಗಿ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳ ಪಾಲಕರು ಭಯಗೊಂಡಿದ್ದಾರೆ. ಪ್ರತಿ ನಿತ್ಯ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಕಾರವಾರಕ್ಕೆ ಬರುತ್ತಾರೆ. ಪಕ್ಕದ ಸದಾಶಿವಗಡ ಸೇರಿ ಇತರ ಪ್ರದೇಶಗಲ್ಲಿರುವ ಶಿಕ್ಷಣ ಸಂಸ್ಥೆಗೆ ತೆರಳುತ್ತಾರೆ. ಅಲ್ಲದೇ ಸೇತುವೆ ಮೇಲೆ ಓಡಾಡುವವರ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಎಲ್ಲರಲ್ಲೂ ಭಯ ಶುರುವಾಗಿದೆ.

ಈಗ ಒಂದೇ ಸೇತುವೆ ಇದ್ದಿದರಿಂದ ಎರಡು ಕಡೆಗಳ ವಾಹನಗಳು ಸಂಚರಿಸುತ್ತಿವೆ. ಸೇತುವೆ ಮೇಲೆ ವೇಗದ ಮಿತಿ ಕೂಡ ಹಾಕಿಲ್ಲ. ಹೀಗಾಗಿ ಮುಂದೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಸೂಕ್ತ ಪರಿಶೀಲನೆ ನಡೆಸಿ ಮುಂದಾಗಬಹುದಾದ ಅಪಾಯ ತಪ್ಪಿಸಬೇಕು. ಜೊತೆಗೆ ನಾಗರಿಕರಲ್ಲಿರುವ ಭಯದ ಸಂಶಯ  ನಿವಾರಿಸಬೇಕು. ಇಲ್ಲದಿದ್ದಲ್ಲಿ ಎಲ್ಲರೂ ಜವಾಬ್ದಾರಿ ಹೊರಬೇಕಾಗಬಹುದು.