ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕುಮಟಾ(Kumta) : ಒಂದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿ ಅದೇ ಶಾಲೆಯಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶಿಕ್ಷಕಿ ವಿಜಯಾ ನಾರಾಯಣ ಭಂಡಾರಿ ಅವರಿಗೆ ಊರಿನವರು, ಶಾಲಾ ಹಳೆ ವಿದ್ಯಾರ್ಥಿಗಳು, ಹಾಗೂ ಹಾಲಿ ವಿದ್ಯಾರ್ಥಿಗಳೆಲ್ಲರೂ ಸೇರಿ ಜೂನ್ 6 ರಂದು ಅತ್ಯಂತ ಅಭಿಮಾನ ಪೂರ್ವಕವಾಗಿ ಬೀಳ್ಕೊಡಲಾಯಿತು.

ಕುಮಟಾ(Kumta) ತಾಲೂಕಿನ ಅಳಕೋಡ ಗ್ರಾಮದಲ್ಲಿ ಕಾರ್ಯಕ್ರಮ  ಜರುಗಿತು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಭಂಡಿವಾಳ ಗ್ರಾಮದಲ್ಲಿ ನೆಲೆಸಿರುವ ಹೊನ್ನಾವರ (Honnavar) ತಾಲೂಕಿನ ಕೆರೆಕೋಣ ಗ್ರಾಮದಲ್ಲಿ ಸುಬ್ಬಿ ಮತ್ತು  ನಾರಾಯಣ ಸುಬ್ರಾಯ ಭಂಡಾರಿ ಅವರ ಪುತ್ರಿ ವಿಜಯಾ ನಾರಾಯಣ ಭಂಡಾರಿ ಅವರು 01-06-1965 ರಂದು ಜನಿಸಿದರು.‌ ಕಡು ಬಡತನದಲ್ಲಿಯೆ ಕೆರೆಕೋಣ ನಂ.೧ರಲ್ಲಿ ಒಂದರಿoದ ಏಳನೇ ತರಗತಿಯವರೆಗೆ ಕಲಿತು ಎ೦ಟನೇ ತರಗತಿಯಿಂದ ಪಿ.ಯು.ಸಿ. ದ್ವಿತೀಯ ವರ್ಷದವರೆಗೆ ಎಸ್.ಕೆ.ಪಿ. ಜೂನಿಯರ್ ಕಾಲೇಜು. ಅರೆಅ೦ಗಡಿಯಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿಯೆ ಇಂಟರ್ನ್ಶಿಪ್ ಮುಗಿಸಿದರು. ತದನಂತರ ಬಿ.ಎ. ಪದವಿಯನ್ನು ಎಸ್.ಡಿ.ಎಮ್. ಶಾಲೇಜು. ಹೊನ್ನಾವರದಲ್ಲಿ ಪೂರ್ಣಗೊಳಿಸಿ ನಂತರದಲ್ಲಿ 1991ರಲ್ಲಿ ಕುಮಟಾ ತಾಲೂಕಿನ ಅಳಕೋಡ ಗ್ರಾ.ಪಂ. ವ್ಯಾಪ್ತಿಯ ಭ೦ಡಿವಾಳ ಗ್ರಾಮದ  ವಿಷ್ಣು ನಾರಾಯಣ ಭಂಡಾರಿ ಅವರನ್ನ ವಿವಾಹವಾದರು.

01-01-1996ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಅಳಕೋಡದಲ್ಲಿ ಶಿಕ್ಷಕಿಯಾಗಿ  ತಮ್ಮ ಸೇವೆಯನ್ನು ಪ್ರಾರಂಭಿಸಿದರು.  ಅಂದಿನಿಂದ ಇಂದಿನವರೆಗೆ  ಸುಮಾರು ಮೂರು ದಶಕಗಳ ಸುದೀರ್ಘ ಕಾಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಅಳಕೋಡದಲ್ಲಿಯೇ ಸೇವೆಗೈದು ದಿನಾಂಕ: 31-05-2025 ರಂದು ಇಲಾಖಾ ನಿಯಮದಂತೆ  ನಿವೃತ್ತರಾಗಿದ್ದಾರೆ.

ತಮ್ಮ ಸೇವಾವಧಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ  ಉತ್ತಮ ಶಿಕ್ಷಕಿ ಎ೦ದು ಗುರುತಿಸಲ್ಪಟ್ಟು ನಿವೃತ್ತರಾದ ಶಿಕ್ಷಕಿ ಶ್ರೀಮತಿ ವಿಜಯಾ ನಾರಾಯಣ ಭಂಡಾರಿ ದಂಪತಿಯರನ್ನು ಶಾಲಾ ಎಸ್.ಡಿ.ಎಮ್.ಸಿ ವಿದ್ಯಾರ್ಥಿಗಳು ಪಾಲಕರು, ಹಳೆಯ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಗಳು, ಊರ ನಾಗರಿಕರು ಅಭಿಮಾನ ಪೂರ್ವಕವಾಗಿ ಆತ್ಮೀಯತೆಯಿಂದ ಸನ್ಮಾನಿಸಿ ಗೌರವದೊಂದಿಗೆ ಬೀಳ್ಕೊಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಪಂ. ಸದಸ್ಯ ಮಹೇಶ ದೇಶಭಂಡಾರಿ,  ಒಂದೇ ಶಾಲೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗುವುದು ವಿಶೇಷ, ನನ್ನ ಜೀವನದಲ್ಲಿ ಇದು ಸಿಕ್ಕಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಸರಕಾರಿ ಶಾಲೆಗಳನ್ನು ಉಳಿಸಿ. ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಹಾಗೂ ಸರ್ಕಾರಿ ಶಾಲೆಗಳನ್ನು ಬೆಳೆಸುವಲ್ಲಿ ಊರಿನವರೆಲ್ಲಾ ಸಹಕರಿಸಬೇಕೆಂದು ವಿನಂತಿಸಿದರು.

ಗ್ರಾ.ಪo ಉಪಾಧ್ಯಕ್ಷೆ ಶ್ರಿಮತಿ ನಳಿನಿ ಎಮ್, ನಾಯ್ಕ  ಶುಭ ಹಾರೈಸಿದರು. ಹಳೆಯ ವಿದ್ಯಾರ್ಥಿ ಪ್ರಸನ್ನ ಭಂಡಾರಿ ಮಾತನಾಡಿ,  ನನಗೆ ಅವರು ಸಂಬoಧದಲ್ಲಿ ಅತ್ತೆಯೇ ಆದರೂ ಶಾಲೆಯಲ್ಲಿ ಅದ್ಯಾವುದೂ ತೋರ್ಪಡಿಸದೇ ಉತ್ತಮ ಶಿಕ್ಷಣ ಕೊಡುವಲ್ಲಿ ವಿಜಯಾ ಅಕ್ಕೋರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಶಾಲೆಯ ಪೂರ್ವ ವಿದ್ಯಾರ್ಥಿ ಶಂಭು ಭಟ್ ಮಾತನಾಡಿ,  ವಿಜಯಕ್ಕೋರು ಸದಾ ಶಾಂತ ರೀತಿಯವರು, ಸಿಟ್ಟು ಮಾಡಿಕೊಂಡವರಲ್ಲ. ಅವರು ಹಾಗೂ ಅವರ ಜೊತೆಯಲ್ಲಿ ಕಲಿಸಿದ ಎಲ್ಲಾ ಶಿಕ್ಷಕರನ್ನು ನೆನೆಸಿಕೊಂಡು ಅವರಿಂದ ನಾವು ಇಂದು ಸಮಾಜದಲ್ಲಿ ಸುಸಂಸ್ಕೃತರಾಗಿ ಬೆಳೆಯಲು ಅನುಕೂಲವಾಯಿತು ಎಂದು ಸ್ಮರಿಸಿದರು.

ನಂತರ ಸಿಆರ್‌ಪಿ ಈಶ್ವರ ಭಟ್ ಮಾತನಾಡಿ,  ಊರಿನವರ ಸಹಕಾರ, ಶಾಲೆಗೆ ಗ್ರಾಪಂ ಅವರ ಕೊಡುಗೆ, ಶಾಲೆ ಪ್ರಾರಂಭದ ಸಮಯದಲ್ಲಿ ಊರಿನವರು ಬೆಳಿಗ್ಗೆ ಕೆಲಸಕ್ಕೆ ಹೋಗಿ ಬಂದು ರಾತ್ರಿ ಬೆಳಕಿನ ವ್ಯವಸ್ಥೆಯಲ್ಲಿ ಶಾಲೆಯ ಜಾಗದ ಕೆಲಸ ಮಾಡಿರುವುದನ್ನು ಸ್ಮರಿಸಿಕೊಂಡು ಧನ್ಯವಾದಗಳನ್ನು ತಿಳಿಸಿದರು.

ಅಳಕೋಡ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ಮಡಿವಾಳ ಮಾತನಾಡಿ,  ವಿಜಯ ಭಂಡಾರಿ ಅವರೊಟ್ಟಿಗೆ ಕಳೆದ 5-6 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಅವರೊಬ್ಬ ಉತ್ತಮ ಶಿಕ್ಷಕಿ, ಅವರಲ್ಲಿ ಸಹನೆ, ತಾಳ್ಮೆ ತುಂಬಾ ಇದೆ. ಅವರಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಗುಣ ನಡತೆ ಹೊಂದಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕಿ ವಿಜಯಾ ಭಂಡಾರಿ,  ಇಷ್ಟೆಲ್ಲಾ ಜನರು ಬಂದು ತುಂಬಾ ಪ್ರೀತಿ- ಅಭಿಮಾನದಿಂದ ನನಗೆ ಸನ್ಮಾನ ಮಾಡಿರುವುದನ್ನು ಕಂಡರೆ ತುಂಬಾ ಖುಷಿ ಎನ್ನಿಸುತ್ತದೆ. ನಾನು ಮೊದಲು ಶಾಲೆಗೆ ಸೇರಿದಾಗ ಕಟ್ಟಡದ ಸಮಸ್ಯೆ ತುಂಬಾ ಇತ್ತು, ಆಗ ಶಾಲೆಯಲ್ಲಿ ಆಟಕ್ಕೆ ಬಿಟ್ಟಾಗ ಮಕ್ಕಳನ್ನು ಕಾಯಬೇಕಿತ್ತು ಯಾಕೆಂದರೆ ಕಂಪೌoಡ್ ಇರಲಿಲ್ಲ. ಶಾಲೆ ಮೊದಲು ನನ್ನಿಂದಲೇ ಪ್ರಾರಂಭವಾಯಿತು ಎನ್ನುವುದಕ್ಕೆ ತುಂಬಾ ಖುಷಿಯಿದೆ ಎಂದರು.

ಎಲ್ಲರ ಸಹಕಾರ ಇರುವುದಕ್ಕೆ ಶಾಲೆಯ ಪ್ರಗತಿಗೆ ಸಹಾಯವಾಗಿದೆ. ನನ್ನ ನಂತರದಲ್ಲಿ ಬರುವ ಶಿಕ್ಷಕರಿಗೆ ಇದೇ ರೀತಿಯ ಗೌರವ ಸಿಗುವಂತಾಗಲಿ. ಶಾಲೆಯಲ್ಲಿ ಒಂದು ಕೈತೋಟ ಮಾಡಬೇಕೆಂಬ ಹಂಬಲ ತುಂಬಾ ಇತ್ತು ಆದರೆ ನೀರಿಗಾಗಿ ಪರದಾಟ ಮಾಡಿರುವುದನ್ನು ನೆನಪಿಕೊಂಡು, ದಯಮಾಡಿ ಪಂಚಾಯತದವರು ನಮ್ಮ ಶಾಲೆಯ ಕಂಪೌoಡ್ ಒಳಗಡೆ ನೀರಿನ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿಸಿಕೊoಡರು.

ಈ ಸಂದರ್ಭದಲ್ಲಿ ಗ್ರಾ.ಪಂಚಾಯತ್ ಉಪಾದ್ಯಕ್ಷೆ  ನಳಿನಿ ಮಹೇಂದ್ರ ನಾಯ್ಕ, ಸದಸ್ಯ  ಮಹೇಶ ದೇಶಭಂಡಾರಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಜಯಶ್ರೀ ಎನ್ ಗೌಡ, ಶಾಲಾ ಮುಖ್ಯಶಿಕ್ಷಕ  ಸುಧಾಕರ ಮಡಿವಾಳ, ಶಿಕ್ಷಾಣಾಭಿಮಾನಿಗಳಾದ ಶಿವರಾಮ ಭಟ್, ಅದೇ ಶಾಲೆಯಲ್ಲಿ 7 ವರ್ಷಗಳ ಸೇವೆ ಸಲ್ಲಿಸಿ ಸದ್ಯ ಹೊನ್ನಾವರ ಸಂತೆಗುಳಿ ಸಿ.ಆರ್.ಪಿ  ಈಶ್ವರ ಭಟ್, ಶಿಕ್ಷಕಿ  ಶ್ಯಾಮಲಾ ಹೆಗಡೆ, ಗ್ರಾಮಸ್ಥರಾದ ಮಾದೇವ ಭಟ್, ಗೊಪಾಲ ಗೌಡ, ಶಾಲೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಮುಂತಾದವರು ಉಪಸ್ಥಿತರಿದ್ದರು.

ಇದನ್ನು ಓದಿ : RCB ವಿಜಯೋತ್ಸವದಲ್ಲಿ ಕಾಲ್ತುಳಿತ. ವಿರಾಟ್ ಕೊಹ್ಲಿ ಮೇಲೆ ದೂರು ದಾಖಲು.

ಕಾಲ್ತುಳಿತ ಪ್ರಕರಣ. ಪೊಲೀಸರ ದಾಳಿ. ಪ್ರಮುಖರು ನಾಪತ್ತೆ.