ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ನಗರದ ಕೋಡಿಬಾಗ ಸಾಯಿಕಟ್ಟಾದ ಶ್ರೀ ಸಾಯಿಮಂದಿರದಲ್ಲಿ ಇತ್ತೀಚೆಗೆ ನಡೆದ ಕಳ್ಳತನದ ಪ್ರಕರಣದಲ್ಲಿ ಪೊಲೀಸರು ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ರಾತ್ರಿ ಬಾಗಿಲಿನ ಕೊಂಡಿ ಮುರಿದು ದೇವಸ್ಥಾನದ ಮೂರ್ತಿಯ ಮೇಲಿದ್ದ ಲಕ್ಷಾಂತರ ರೂಪಾಯಿ ಬೆಲೆಯ ಬೆಳ್ಳಿಯ ಆಭರಣಗಳನ್ನು ಕದ್ದಿದ್ದ ಆರೋಪಿಗಳು ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಹರಿಯಾಣದವರು ಎನ್ನುವುದು ಪತ್ತೆಯಾಗಿದೆ.
ಏಪ್ರಿಲ್ 15 ರಂದು ನಗರದ ಸಾಯಿಮಂದಿರದಲ್ಲಿ ಕಳ್ಳತನ ನಡೆದಿದ್ದು, ದೇವಸ್ಥಾನದ ಬಾಗಿಲಿನ ಕೊಂಡಿ ಮುರಿದು ಒಳನುಗ್ಗಿದ್ದ ಕಳ್ಳರು, ಸಾಯಿಬಾಬಾ ಮೂರ್ತಿಯ ಮೇಲಿದ್ದ ಲಕ್ಷಾಂತರ ರೂ. ಬೆಲೆಬಾಳುವ ಬೆಳ್ಳಿಯ ಕೊಡೆ ಸೇರಿದಂತೆ ಆಭರಣಗಳನ್ನು ಕದ್ದು ಪರಾರಿಯಾಗಿದ್ದರು. ಕಳ್ಳರ ಕೈಚಳಕ ದೇವಸ್ಥಾನದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ದೇವಸ್ಥಾನದ ಸಂತೋಷ ರಾಘೋಬಾ ನಾಯ್ಕ ಅವರು ದೂರು ನೀಡಿದ್ದರು.
ಕಾರವಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಅಧೀಕ್ಷಕ ಎಂ.ನಾರಾಯಣ ಮೂರು ತಂಡಗಳನ್ನು ರಚಿಸಿ, ಕಳ್ಳರನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಿದ್ದರು. ಕಾರವಾರ ನಗರ ಠಾಣೆಯ ಅಂದಿನ ಪಿಐ ಆಗಿದ್ದ ಯು.ಹೆಚ್ ಸಾತೇನಹಳ್ಳಿ, ಉಪನಿರೀಕ್ಷಕ ರವೀಂದ್ರ ಬಿರಾದರ ನೇತೃತ್ವದ ತಂಡವು ಕಳ್ಳರ ಜಾಡು ಹಿಡಿದು ಕಾರವಾರ, ಗೋವಾ, ಮಧ್ಯಪ್ರದೇಶ, ದೆಹಲಿ ಮತ್ತು ಹರಿಯಾಣದ ಫರಿದಾಬಾದ್ ವರೆಗೆ ತೆರಳಿ ಆರೋಪಿಗಳ ಮಾಹಿತಿ ಕಲೆಹಾಕಿದ್ದರು.
ಅದರಂತೆ ಫರಿದಾಬಾದ್‌ನಲ್ಲಿ ಅಡಗಿದ್ದ ಆರೋಪಿಗಳನ್ನು ಪತ್ತೆಹಚ್ಚಿ ಉತ್ತರಾಖಂಡ ಮೂಲದ ಕುಲವಂತ ಸಿಂಗ್(40), ರೇಶಮ ಸಿಂಗ್(34) ಹಾಗೂ ಉತ್ತರಪ್ರದೇಶದ ತ್ರೀಲೋಕ ಸಿಂಗ್(32)ನನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳಿಂದ 6 ಕೆ.ಜಿ ತೂಕದ ಬೆಳ್ಳಿಯ ಛತ್ರಿ ಮತ್ತು ರೂ. 5.50 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಜಪ್ತು ಮಾಡಲಾಗಿದೆ. ಆರೋಪಿಗಳು ಹರಿಯಾಣ, ಪಂಜಾಬ್, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಚಂಡೀಗಢ ಮತ್ತು ಕರ್ನಾಟಕದ ದೇವಸ್ಥಾನಗಳು, ಮನೆಗಳು ಮತ್ತು ಅಂಗಡಿಗಳಲ್ಲಿ ಕಳ್ಳತನ ಮಾಡುವ ಕುಖ್ಯಾತ ತಂಡದ ಸದಸ್ಯರೆಂದು ತನಿಖೆ ವೇಳೆ ತಿಳಿದುಬಂದಿದೆ.
ಏಪ್ರಿಲ್ 15 ಮಂಗಳವಾರ ಕಾರವಾರದ ಸಾಯಿ ಮಂದಿರದಲ್ಲಿ ಕಳ್ಳತನ ನಡೆದ ಬೆನ್ನಲ್ಲೇ ಸೋಮವಾರ ಸಂಜೆ ಗೋವಾದ ವಾಸ್ಕೋ ರೈಲ್ವೇ ನಿಲ್ದಾಣದಲ್ಲಿ 5.3 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳ್ಳಿಯ ಕೊಡೆ ಪತ್ತೆಯಾಗಿತ್ತು. ರೈಲ್ವೇ ಪೊಲೀಸರು ಎಂದಿನಂತೆ ಪೆಟ್ರೋಲಿಂಗ್ ಮಾಡುತ್ತಿದ್ದ ವೇಳೆ ಬೆಡ್‌ಶೀಟ್‌ನಲ್ಲಿ ಸುತ್ತಿದ್ದ ಅನಾಥವಾಗಿ ಬಿದ್ದಿದ್ದ ಬ್ಯಾಗ್‌ನ್ನು ಪರಿಶೀಲಿಸಿದಾಗ, ಬೆಳ್ಳಿಕೊಡೆ ಪತ್ತೆಯಾಗಿದ್ದು, ಸಾಂಪ್ರದಾಯಿಕ ದೇವರ ಕೊಡೆ ಎಂದು ಚಿನ್ನದ ವ್ಯಾಪಾರಿಯೊಬ್ಬರು ದೃಢಪಡಿಸಿದ್ದರು. ಇದರ ತೂಕ ಸುಮಾರು 6.4 ಕೆಜಿಯಿದ್ದು, ಸುಮಾರು 5,37,600 ರೂ. ಮೌಲ್ಯದ್ದಾಗಿದೆ ಎಂದು ಅಂದಾಜು ಮಾಡಲಾಗಿತ್ತು. ಇದೀಗ ಅಂತರರಾಜ್ಯ ಆರೋಪಿಗಳು ಸಿಕ್ಕಿಬಿದ್ದಿರುವ ಬೆನ್ನಲ್ಲೇ ಮತ್ತಷ್ಟು ಕಳ್ಳತನ ಪ್ರಕರಣಗಳು ಬಯಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಪ್ರಕರಣದ ತನಿಖೆಯಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ನಾರಾಯಣ್.ಎಂ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ, ಜಗದೀಶ ಎಂ, ಉಪಾಧೀಕ್ಷಕ ಎಸ್.ವಿ.ಗಿರೀಶ್ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ತಂಡದ ಕಾರ್ಯವೈಖರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಮೂರು ದಶಕಗಳಿಂದ ಒಂದೇ ಶಾಲೆಯಲ್ಲಿ ಸೇವೆ. ಮಾದರಿ ವಿಜಯಾ ಶಿಕ್ಷಕಿಗೆ ಗ್ರಾಮಸ್ಥರಿಂದ ಹೃದಯಸ್ಪರ್ಶಿ ಬಿಳ್ಕೋಡುಗೆ.
RCB ವಿಜಯೋತ್ಸವದಲ್ಲಿ ಕಾಲ್ತುಳಿತ. ವಿರಾಟ್ ಕೊಹ್ಲಿ ಮೇಲೆ ದೂರು ದಾಖಲು.