ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ‘ಮೀನುಗಾರರ ಸಂಕಷ್ಟ ಪರಿಹಾರ ನಿಧಿ’ಯನ್ನು ನೈಜ ಮೀನುಗಾರರ(Real Fishermans) ಸಂಕಷ್ಟಗಳಿಗೆ ಬಳಸದೇ ಅನ್ಯ ಉದ್ದೇಶಗಳಿಗೆ ಹಾಗೂ ಬೇರೆ ಸಮುದಾಯದವರ(Other Community) ಸಾವಿನ ಪ್ರಕರಣಗಳಿಗೂ ಬಳಸಲಾಗುತ್ತಿದೆ ಎಂದು ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಮೀನುಗಾರ ವಿಭಾಗದ ಅಧ್ಯಕ್ಷ ಗಣಪತಿ ಮಾಂಗ್ರೆ ಗಂಭೀರ ಆರೋಪ ಮಾಡಿದ್ದಾರೆ.
ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾಂತ್ರೀಕೃತ ದೋಣಿ(Mechanized Boat) ಹಾಗೂ ಬೋಟುಗಳಿಗೆ ಇಂಧನ ತುಂಬಿಸುವಾಗ ಮೀನುಗಾರರು ಖರೀದಿಸುವ ಡೀಸೆಲ್ ಮೇಲೆ 1.5% ಹಣವನ್ನು ಕಡ್ಡಾಯವಾಗಿ ಕಡಿತಗೊಳಿಸಿ ಸಂಕಷ್ಟ ಪರಿಹಾರ ನಿಧಿಗೆ ಜಮಾ ಮಾಡಲಾಗುತ್ತದೆ. ಮೀನುಗಾರರ ಪ್ರತಿ ಲೀಟರ್ ಡೀಸೆಲ್ ಖರೀದಿಯಿಂದ ಸಂಗ್ರಹವಾಗುವ ಹಣದಿಂದಲೇ ಈ ನಿಧಿ ನಿರ್ಮಾಣವಾಗುತ್ತಿದೆ.
ಸಮುದ್ರದಲ್ಲಿ ಮೀನುಗಾರಿಕೆ(Sea Fishing) ನಡೆಸುವ ಸಂದರ್ಭದಲ್ಲಿ ಸಂಭವಿಸುವ ಅನಿರೀಕ್ಷಿತ ಅಪಘಾತಗಳು, ದೋಣಿ, ಬೋಟು ಹಾಗೂ ಬಲೆಗಳಿಗೆ ಹಾನಿ, ನೈಸರ್ಗಿಕ ವಿಕೋಪಗಳು ಸೇರಿದಂತೆ ಮೀನುಗಾರರು ಮೃತಪಟ್ಟಾಗ ಅವರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಸರ್ಕಾರ ಹಾಗೂ ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಈ ನಿಧಿ ರೂಪಿಸಲಾಗಿದೆ. ಹೀಗಾಗಿ ಮೀನುಗಾರರ ಸಂಕಷ್ಟ ನಿವಾರಣೆಗೆ ನಿಧಿಯನ್ನು ಸಮರ್ಪಕವಾಗಿ ಬಳಸಬೇಕು ಎಂದು ಮಾಂಗ್ರೆ ಆಗ್ರಹಿಸಿದರು.
ಇತ್ತೀಚೆಗೆ ನೈಜ ಮೀನುಗಾರರಿಗೆ ನೆರವು ಸಿಗುತ್ತಿಲ್ಲ. ಹಳ್ಳ–ಕೊಳ್ಳಗಳಲ್ಲಿ ಮೋಜು–ಮಸ್ತಿಗೆ ತೆರಳಿದ ವೇಳೆ ಮೃತಪಟ್ಟವರನ್ನೂ ಒತ್ತಡ ಹೇರಿ ಮೀನುಗಾರರೆಂದು ಪ್ರಕರಣ ತಿರುಚಿ, ಮೀನುಗಾರರಿಂದ ಕ್ರೋಢೀಕರಿಸಿದ ಹಣವನ್ನೇ ಪರಿಹಾರವಾಗಿ ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಕೆಲವರು ರಾಜಕೀಯ ಪ್ರಭಾವ ಬಳಸಿ, ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೇರೆ ಸಮುದಾಯದವರ ಅಥವಾ ಇತರೆ ವ್ಯಕ್ತಿಗಳ ಸಾವಿಗೂ ಈ ನಿಧಿಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಅನಧಿಕೃತವಾಗಿ ಬಿಡುಗಡೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೀನುಗಾರರ ಹಿತಾಸಕ್ತಿಗೆ ಧಕ್ಕೆ ತರುವ ನಿಧಿ ದುರ್ಬಳಕೆಗೆ ಸರ್ಕಾರ ಕಡಿವಾಣ ಹಾಕಿ ಸ್ಪಷ್ಟನೆ ನೀಡಬೇಕು. ಇಲ್ಲವಾದರೆ ಸಂಘಟಿತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ನಿಧಿಯನ್ನು ಮೀನುಗಾರರಿಗಷ್ಟೇ ಬಳಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D K Shivakumar) ಹಾಗೂ ಮೀನುಗಾರಿಕಾ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೀನುಗಾರ ಮುಖಂಡ ಮೋಹನ ಅವರ್ಸೆಕರ್, ರಾಜೇಶ ಮಾಜಾಳಿಕರ್, ಪರ್ಷಿಯನ್ ಬೋಟ್ ಯೂನಿಯನ್ ಅಧ್ಯಕ್ಷ ಮುರಳಿಧರ ತಾಂಡೇಲ, ಮೀನುಗಾರರ ಸೇವಾ ಸಂಘ ಬೈತಖೋಲ ಅಧ್ಯಕ್ಷ ನಾಗರಾಜ ಹರಿಕಂತ್ರ, ವಿಕ್ರಮ್ ತಾಂಡೇಲ, ಅಶೋಕ ಹರಿಕಂತ್ರ, ಚಂದ್ರಕಾಂತ ಹರಿಕಂತ್ರ, ರೋಹನ್ ಗಂಗಾವಳಿಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
