ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news)ಕಾರವಾರ(Karwar): ಇಲ್ಲಿನ ಎಂಜಿ ರಸ್ತೆ(M G Road) ಪಕ್ಕದಲ್ಲಿರುವ ವೈದ್ಯಕೀಯ ಕಾಲೇಜಿನ ಎಸ್‌ಟಿಪಿಯಿಂದ ಹೊರಬರುವ ಕೊಳಚೆ ನೀರು ವಾರ್ಡ್‌ ನಂ.5ರ ಪ್ರದೇಶದಲ್ಲಿ ಹರಿದುಬರುತ್ತಿದ್ದು, ಇದರಿಂದ ನೀರು ಶೇಖರಣೆಯಾಗಿ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ ಎಂದು ಮಾಜಿ ನಗರಸಭಾ ಸದಸ್ಯೆ ರೋಶನಿ ರಾಜೇಶ ಮಾಳ್ಸೇಕರ ನಗರಸಭೆಗೆ ದೂರು ನೀಡಿದ್ದಾರೆ.

ಕೊಳಚೆ ನೀರು ಹರಿದುಬರುವುದರಿಂದ ಸ್ಥಳೀಯ ಪ್ರದೇಶದಲ್ಲಿ ನೀರು ನಿಂತು, ಅಲ್ಲಿನ ಬೋರ್‌ವೆಲ್‌ಗಳ ಕುಡಿಯುವ ನೀರು ಕಲುಷಿತಗೊಳ್ಳುವ ಸಾಧ್ಯತೆ ಇದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಆತಂಕವಿದೆ ಎಂದು ತಿಳಿಸಿದ್ದಾರೆ.

ಕೊಳಚೆ ನೀರಿನಿಂದಾಗಿ ವಾರ್ಡ್‌ನ ಮನೆಗಳ ಸುತ್ತಮುತ್ತಲೂ ತೀವ್ರ ದುರ್ವಾಸನೆ ಹರಡಿದ್ದು, ಆಹಾರ ಸೇವನೆಗೂ ತೊಂದರೆಯಾಗುತ್ತಿದೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜಿನ ಎಸ್‌ಟಿಪಿಯ(Medical College STP) ಕೊಳಚೆ ನೀರನ್ನು ವಾರ್ಡ್‌ ನಂ.5ರ ಪ್ರದೇಶಕ್ಕೆ ಹರಿಬಿಡುವುದನ್ನು ತಕ್ಷಣ ನಿಲ್ಲಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ನಗರಸಭೆ ಪೌರಾಯುಕ್ತರಿಗೆ(CMC Commisioner) ಮನವಿ ಮಾಡಿದ್ದಾರೆ.