ಹಳಿಯಾಳ : ಹಣ ಗಳಿಸಬೇಕು, ಆದರೆ ಹಣ ಗಳಿಸುವ ಹುಚ್ಚಿರಬಾರದು. ನಾನು ಗಳಿಸಿದ ಎಲ್ಲವೂ ಎಲ್ಲರಿಗೂ ಸೇರಬೇಕಾಗಿದ್ದು. ಆ ನಿಟ್ಟಿನಲ್ಲಿ ಅದನ್ನು ಟ್ರಸ್ಟ್ ಮೂಲಕ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ವಿ ಆರ್ ಮೆಮೊರಿಯಲ್ ಟ್ರಸ್ಟ್ ಸಂಸ್ಥಾಪಕ ಆರ್ ವಿ ದೇಶಪಾಂಡೆ ಹೇಳಿದರು.
ಸೋಮವಾರ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಭಾಂಗಣದಲ್ಲಿ ಜರುಗಿದ ಆರ್ ವಿ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಲ್ಲಿಯವರೆಗೆ 26000 ಜನ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದಿದ್ದು ಹಲವಾರು ಕಂಪನಿಗಳಲ್ಲಿ ಮತ್ತು ಸ್ವ ಉದ್ಯೋಗದಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದ ಅವರು, ಕೌಶಲ್ಯಾಭಿವೃದ್ದಿ ತರಬೇತಿಯ ಪ್ರಾಮುಖ್ಯತೆಯನ್ನು 22 ವರ್ಷಗಳ ಹಿಂದೆ ನಮ್ಮ ಸಂಸ್ಥೆ ಅರಿತಿದೆ. ಆದರೆ ಇತ್ತೀಚೆಗೆ ದೇಶದೆಲ್ಲೆಡೆ ಕೌಶಲ್ಯಾಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಅಂದರೆ ನಮ್ಮ ಆಲೋಚನೆಗಳು ಯಾವತ್ತೂ ಜನಪರವಾಗಿರುತ್ತವೆ ಎನ್ನುವುದು ಒಂದು ನಿದರ್ಶನ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಟ್ರಿಟಾನ್ ವಾಲ್ವಸ್ ಲಿ. ಮೈಸೂರ ನ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಗೋಕರ್ಣ ಮಾತನಾಡಿ, ಇಂದು ದೇಶ ಎದುರಿಸುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರಿಶ್ರಮ ಮತ್ತು ಪ್ರಾಮಾಣಿಕತೆ ಬಹು ಮುಖ್ಯ ಎಂದರಲ್ಲದೇ ಶೈಕ್ಷಣಿಕವಾಗಿ ಸಾಧನೆ ಮಾಡಿದ ಎಲ್ಲರ ಪರಿಶ್ರಮ ಮತ್ತು ಜಾಣ್ಮೆ ಬಹಳಷ್ಟು ಆಶ್ಚರ್ಯ ಚಕಿತರನ್ನಾಗಿಸಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಸಾದ ಆರ್ ದೇಶಪಾಂಡೆ ಮಾತನಾಡಿ, 2047ಕ್ಕೆ ವಿಕಸಿತ ಭಾರತ ದ ಕನಸನ್ನು ಕಟ್ಟಿಕೊಂಡು ಮುನ್ನಡೆಯುತ್ತಿರುವ ದೇಶದ ಕನಸಿಗೆ ಬೆಂಬಲವಾಗಿ ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನಿಂತಿದೆ. ದೇಶದ ಉತ್ತಮ ಆರ್ಸೆಟಿ ಯಾಗಿ ನಮ್ಮ ಕೆನರಾ ದೇಶಪಾಂಡೆ ಆರ್ಸೆಟಿ ಗೆ ರಾ಼ಷ್ಟ್ರ ಮಟ್ಟದ ಪ್ರಶಸ್ತಿ ಕೂಡ ಪಡೆದಿದೆ. ಎಲ್ಲ ಸಾಧನೆ ಮತ್ತು ಬೆಳವಣಿಗೆಗಳಿಗೂ ಉತ್ತಮ ಮಾರ್ಗದರ್ಶನ ಮತ್ತು ಸಂಸ್ಕ್ರತಿ ಮುಖ್ಯ ಎಂದರು.
ಟ್ರಸ್ಟ್ ವತಿಯಿಂದ ಜಿಲ್ಲೆಯಾದ್ಯಂತ ಆಗಮಿಸಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 50 ವಿದ್ಯಾರ್ಥಿಗಳನ್ನ ಗೌರವಿಸಿ ಪುರಸ್ಕರಿಸಲಾಯಿತು. ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಜಿಲ್ಲೆಯ 7 ಸಾಧಕರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಇರಾಮ್ ಶೇಖ್ ಮಾತನಾಡಿದರು. ಟ್ರಸ್ಟ್ ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಅತಿಥಿಗಳ ಕಿರುಪರಿಚಯದೊಂದಿಗೆ ಸ್ವಾಗತಿಸಿ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು. ಶ್ರೀಧರ ಬುಳ್ಳಣ್ಣವರ ಮತ್ತು ನೆಲ್ಸಿ ಗೋನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ರಾಧಾಬಾಯಿ ದೇಶಪಾಂಡೆ, ಮತ್ತು ಶ್ಯಾಮ ಕಾಮತ ಕೂಡ ವೇದಿಕೆಯಲ್ಲಿದ್ದರು.