ಭಟ್ಕಳ : ರಾಜ್ಯೋತ್ಸವದ ನಿಮಿತ್ತ ಕಲಾಸಿರಿಯಲ್ಲಿ ಹಮ್ಮಿಕೊಂಡಿರುವ ಕವಿಗೋಷ್ಠಿಯಲ್ಲಿ ಕಾವ್ಯಸಿರಿಯೇ ಅರಳಿ, ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಜರುಗಿ ದೀಪಾವಳಿಯ ಸೊಬಗನ್ನು ಹೆಚ್ಚಿಸಿದೆ ಎಂದು ಸಾಹಿತಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕೋಶಾಧ್ಯಕ್ಷ ಪಿ .ಆರ್. ನಾಯ್ಕ ನುಡಿದರು.
ತಾಲೂಕಿನ ಚಿತ್ರಾಪುರದಲ್ಲಿ ಸಾಹಿತಿ ಶ್ರೀಧರ್ ಶೇಟ್ ಅವರ ಸ್ವಗೃಹ ಕಲಾಸಿರಿಯಲ್ಲಿ ಜಿಲ್ಲಾ ಕಸಾಪ, ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಲಾಸಿರಿ ಪ್ರತಿಷ್ಠಾನದ ವತಿಯಿಂದ ನವೆಂಬರ್ ಮಾಸದುದ್ದಕ್ಕೂ ನಡೆಯುವ ಕನ್ನಡ ಕಾರ್ತಿಕ ಕಾರ್ಯಕ್ರಮದ ಮನೆಯಂಗಳದಲ್ಲಿ ಕಾವೋತ್ಸವ ಹಾಗೂ ಕಲಾಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಪ್ತವಾದ ಮಾತು ಕತೆ, ಸಾಹಿತ್ಯದ ಹೆಜ್ಜೆಗುರುತು , ಅನಿಸಿದ್ದನ್ನು ಗೀಚಿ ಓದಿದ ಕಾವ್ಯಾನುಭವ, ಮನೆ ಮಂದಿಯಂತೆ ಎಲ್ಲರೂ ಸಂಕೋಚವಿಲ್ಲದ ಮಾತಿನ ಭರಾಟೆಯ ಸಂಗಮದಲ್ಲಿ ನಡೆದ ಕವಿಗೋಷ್ಠಿಯು ದೀಪಾವಳಿಯ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಮತ್ತು ಸಾಹಿತ್ಯಾಸಕ್ತರು ಪಾಲ್ಗೊಂಡಿರುವುದು ನೋಡಿದರೆ ಸಾಹಿತ್ಯ ಸಮ್ಮೇಳನವನ್ನು ನೆನಪಿಸುವಂತಿದ್ದು, ಭಟ್ಕಳದ ನೆಲದಲ್ಲಿ ಸಾಹಿತ್ಯಕ ಕಾರ್ಯಕ್ರಮಗಳಿಗೆ ಸಾಹಿತ್ಯಾಸಕ್ತರು ಹೆಚ್ಚು ಹೆಚ್ಚು ಭಾಗವಹಿಸುತ್ತಿರುವುದು ಮನಸಿಗೆ ಹಿತ ಕೊಡುವಂಥದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಭಟ್ಕಳ ತಾಲೂಕ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಪಿ.ಆರ್.ನಾಯ್ಕ, ಶ್ರೀಧರ ಶೇಟ್, ಮಾನಾಸುತ ಶಂಭು ಹೆಗಡೆ ವೇದಿಕೆಯಲ್ಲಿರುವುದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದೆ. ಪರಿಷತ್ತನ್ನು ಈ ಹಿಂದಿನ ಅಧ್ಯಕ್ಷರು ಕಟ್ಟಿ ಬೆಳೆಸಿದ್ದು, ವಿಧಾಯಕ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪಲು ಎಲ್ಲರ ಸಹಕಾರ ಅಪೇಕ್ಷಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸುಮಾರು 30-35 ವರ್ಷಗಳಿಂದ ಸಾಹಿತ್ಯ ಕೃಷಿಯನ್ನು ಮಾಡಿಕೊಂಡು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿ, ನಾಟಕಕಾರರಾಗಿ, ಸಮಾಜ ಸೇವಕರಾಗಿ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯ ಸಾಹಿತಿ ಶಂಕರ ಕೆ. ನಾಯ್ಕ ಅವರಿಗೆ ಕಲಾಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶಿರಾಲಿಯ ಜನತಾ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ 21 ವರ್ಷಗಳ ಶಿಕ್ಷಣ ಸೇವೆ ಸಲ್ಲಿಸಿದ ಪ್ರಾಂಶುಪಾಲ ಅಮೃತ ರಾಮರಥ ದಂಪತಿಗಳು ದಾಂಡೇಲಿಗೆ ವರ್ಗಾವಣೆಗೊಂಡಿರುವ ಪ್ರಯುಕ್ತ ಕಲಾಸಿರಿ ಪ್ರತಿಷ್ಠಾನದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಂಕರ ನಾಯ್ಕ ಮತ್ತು ಅಮೃತ ರಾಮರಥ ಮಾತನಾಡಿ, ಈ ಸನ್ಮಾನದ ಮೂಲಕ ತಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾಹಿತಿಗಳಾದ ನಾರಾಯಣ ಯಾಜಿ ಶಿರಾಲಿ, ಮಾನಸುತ ಶಂಭು ಹೆಗಡೆ ಮತ್ತು ಶಿರಾಲಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲಾಸಿರಿ ಪ್ರತಿಷ್ಠಾನದ ಸಾಹಿತ್ಯ ಸೇವೆಯನ್ನು ಪ್ರಶಂಸಿಸಿ ಮಾತನಾಡಿದರು.
ಭಟ್ಕಳ ಕಸಾಪ ಗೌರವ ಕೋಶಾಧ್ಯಕ್ಷ ಹಾಗೂ ಕಲಾಸಿರಿ ಪ್ರತಿಷ್ಠಾನದ ಸಂಚಾಲಕ ಸಾಹಿತಿ ಶ್ರೀಧರ್ ಶೇಟ್ ಸರ್ವರನ್ನು ಸ್ವಾಗತಿಸಿ ಆಶಯ ನುಡಿಗಳನ್ನಾಡಿದರು. ಕವಿಗೋಷ್ಠಿಯಲ್ಲಿ ಕವಿಗಳಾದ ಎಂ.ಡಿ.ಪಕ್ಕಿ, ವೆಂಕಟೇಶ ಬೈಲೂರು, ಎಂ.ಜಿ. ತಿಲೋತ್ತಮೆ, ಮಂಜುನಾಥ ನಾಯ್ಕ ಯಲ್ವಡಿ ಕವೂರ್,
ಸವಿತಾ ನಾಯ್ಕ, ಚಂದ್ರಶೇಖರ ಪಡುವಣಿ, ಜಯಶ್ರೀ ಆಚಾರಿ, ಹೇಮಲತಾ ಶ್ರೀಧರ್, ಕೆ.ಎಲ್.ಶಾನಭಾಗ್,
ರಾಜೀವಿ ಎಂ ಮೊಗೇರ, ನಂದನ ನಾಯ್ಕ, ಪ್ರಸಾದ ಶಾನಭಾಗ ಸ್ಟರಚಿತ ಕವನಗಳನ್ನು ವಾಚಿಸಿದರು. ಕಲಾಸಿರಿ ಪ್ರತಿಷ್ಠಾನದ ಕಾರ್ಯದರ್ಶಿ ಶಿಕ್ಷಕಿ ಹೇಮಲತಾ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ತಾಲೂಕ ಕಸಾಪ ಕಾರ್ಯದರ್ಶಿ ನಾರಾಯಣ ನಾಯ್ಕ, ಶ್ರೀಶಾ ಶೇಟ್, ಮಿತಾ ರಾಮರಥ, ಸುರೇಶ ಮುರ್ಡೇಶ್ವರ, ಮಂಜುನಾಥ ಕೋಡಿಹಿತ್ಲು, ರಾಜಂ ಹಿಚ್ಕಡ, ದೀಪಕ ನಾಯ್ಕ, ಶೀತಲಾ ಚಿತ್ರಾಪುರ ಇನ್ನಿತರರು ಉಪಸ್ಥಿತರಿದ್ದರು.
ಇದನ್ನು ಓದಿ : ಮಾನವೀಯ ಗುಣ ಬಿಟ್ಟು ಹೋದ ಚಿತ್ರ ನಿರ್ದೇಶಕ
ಹೋರಿ ಬೆದರಿಸುವ ಸ್ಪರ್ಧೆ. ಪ್ರಾಣ ಕಳೆದುಕೊಂಡ ಯುವಕ
ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದ ಶಾಸಕ