ಅಂಕೋಲಾ : ತಾಲೂಕಿನ ಗಂಗಾವಳಿ ನದಿಯಲ್ಲಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಮಂಗಳವಾರ ಸಂಜೆ ಮತ್ತೆ ಆರಂಭಿಸಲಾಗಿದೆ.

ಶಾಸಕ ಸತೀಶ್ ಸೈಲ್ ಮತ್ತು ಅಂಕೋಲಾ ಜನತೆಯ ಒತ್ತಾಯದ ಮೇರೆಗೆ ಈಶ್ವರ್ ಮಲ್ಪೆ ತಂಡ ಕಾರ್ಯಾಚರಣೆಗೆ ಇಳಿದಿದೆ. ಈ ವೇಳೆ ಲಾರಿಯೊಂದರ ಜಾಕ್ ನ್ನ ಈಶ್ವರ್ ಮಲ್ಪೆ ಹೊರ ತೆಗೆದಿದ್ದಾರೆ.

ಜುಲೈ 16 ರಂದು ಗುಡ್ಡ ಕುಸಿದು ಕೇರಳದ ಭಾರತ್ ಬೆಂಜ್ ಟ್ರಕ್ ಮತ್ತು ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಜೊತೆಗೆ ಅಂಕೋಲಾ ತಾಲೂಕಿನ ಜಗನ್ನಾಥ ನಾಯ್ಕ ಮತ್ತು ಗಂಗೆಕೊಳ್ಳದ ಲೋಕೇಶ್ ನಾಯ್ಕ ಕಣ್ಮರೆಯಾಗಿದ್ದರು.

ಹಿಂದೆ ಶೋಧ ನಡೆಸಿದಾಗ ಮಳೆ ಮತ್ತು ನದಿಯ ನೀರಿನ ಹರಿವು ಜಾಸ್ತಿ ಇದ್ದುದರಿಂದ ತೊಂದರೆ ಎದುರಾಗಿತ್ತು. ಮುಳುಗು ತಜ್ಞ ಈಶ್ವರ್ ಮಲ್ಪೆ ಅವರೆ ಎರಡು ದಿನಗಳ ಕಾಲ ಗಂಗಾವಳಿ ನದಿಯಲ್ಲಿ ಮುಳುಗಿ ಶೋಧ ಮಾಡಿದಾಗ ಬೃಹತ್ ಆಲದ ಮರ, ವಾಹನ, ಕಲ್ಲು, ಬಂಡೆಗಳು ಇರುವುದು ಗೊತ್ತಾಗಿತ್ತು.

ಈಗ ಮಳೆ ಕಡಿಮೆಯಾಗಿದ್ದರಿಂದ ಶೋಧಕ್ಕೆ ಅನುಕೂಲ ವಾತಾವರಣವಿದೆ. ಹೀಗಾಗಿ ಶಾಸಕ ಸತೀಶ್ ಸೈಲ್ ಸೂಚನೆ ಮೇರೆಗೆ ಇಂದು ಸಂಜೆ ಮತ್ತೆ ಈಶ್ವರ್ ಮಲ್ಪೆ ಕಾರ್ಯಾಚರಣೆ ಶುರು ಮಾಡಿದ್ದಾರೆ. ಮೊದಲ ಹಂತದಲ್ಲಿ ಲಾರಿಯ ಜಾಕ್ ಪತ್ತೆ ಮಾಡಲಾಗಿದ್ದು ನಾಳೆ ಇನ್ನಷ್ಟು ಪ್ಲ್ಯಾನ್ ಮಾಡಿ ಶೋಧ ನಡೆಸುವ ಸಾಧ್ಯತೆ ಇದೆ.

ಕಾರ್ಯಾಚರಣೆಗೆ ಈಗಾಗಲೇ ಆಪತ್ ಬಾಂಧವ ಈಶ್ವರ್ ಮಲ್ಪೆ ತಂಡ ಪರಿಕರಗಳನ್ನ ತಂದಿದ್ದು, ಅಂಡರ್ ವಾಟರ್ ಲೈಟ್, ಟಾರ್ಚ್ ಸೇರಿದಂತೆ ಇತರೆ ವಸ್ತುಗಳನ್ನ ತರಿಸಿದೆ. ಯಾವುದೇ ಕ್ಷಣದಲ್ಲಾದರೂ ಮೂವರ ಮೃತ ದೇಹ ಬರುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿಸಲು  ಸ್ಥಳೀಯ ಮೀನುಗಾರರ ಜೊತೆ ಸೇರಿ ಈಶ್ವರ್ ಮಲ್ಪೆ ಮುಂದಾಗಿದ್ದಾರೆ.