ಅಂಕೋಲಾ : ಶಿರೂರು ಗುಡ್ಡ ಕುಸಿತ ಘಟನೆ ಸಂಭವಿಸಿ ತಿಂಗಳು ಸಮೀಪಿಸುತ್ತಿದೆ. ಮೂರು ಕುಟುಂಬಗಳು ತಮ್ಮವರು ಈಗ ಬರುವರೋ ಎಂದು ಕಾದು ಕುಳಿತಿದ್ದಾರೆ. ಎರಡು ವಾರಗಳ ನಂತರ ಇಂದು ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಯಬಹುದೆಂದು ಎಲ್ಲರೂ ಅಂದುಕೊಂಡಿದ್ದರು.
ಆದರೆ ಮಂಗಳವಾರ ಯಾವುದೇ ಕಾರ್ಯಾಚರಣೆ ನಡೆಯಲಿಲ್ಲ. ಬೆಳಿಗ್ಗೆಯೇ ಕೇರಳದ ಮಾಧ್ಯಮ ಪ್ರತಿನಿಧಿಗಳು ಶಿರೂರು ಗ್ರಾಮದಲ್ಲಿ ಬೀಡು ಬಿಟ್ಟಿದ್ದರು. ನೇವಿ ಮುಳುಗು ತಜ್ಞರು ಬರುತ್ತಾರೆ. ರಕ್ಷಣಾ ತಂಡಗಳು ಬರುತ್ತವೆಂದು ಕಾದು ಕುಳಿತಿದ್ದರು. ಆದರೆ ಕೆಲ ಪೊಲೀಸರು ಆಗಮಿಸಿ ವಾಪಾಸ್ ಆದರೂ ಬಿಟ್ಟರೆ ಯಾರು ಬರಲಿಲ್ಲ.
ನದಿಯ ನೀರು ಸಹಜ ಸ್ಥಿತಿಗೆ ಬಂದಿದ್ದರಿಂದ ವಿಷಯ ತಿಳಿದ ಆಪತ್ಬಾಂಧವ ಈಶ್ವರ್ ಮಲ್ಪೆ ತಂಡದವರು ಸ್ಥಳಕ್ಕೆ ಬಂದು ನೋಡಿದರು. ನೀರು ಸಹಜ ಸ್ಥಿತಿಗೆ ಬಂದಿದ್ದು ತಮಗೆ ಅನುಮತಿ ನೀಡಿದರೆ ನಾವು ಮುಳುಗುತ್ತೇವೆ, ಶೋಧ ಮಾಡುತ್ತೇವೆ ಎಂದಿದ್ದರು. ಆದರೆ ಜಿಲ್ಲಾಡಳಿತದಿಂದ ಅನುಮತಿ ಸಿಗದೇ ಸ್ಥಳದಿಂದ ಹೊರಗೆ ಹೋದರು.
ಗುಡ್ಡ ಕುಸಿತದಿಂದ ಕೇರಳದ ಅರ್ಜುನ್, ಅಂಕೋಲದ ಜಗನ್ನಾಥ ನಾಯ್ಕ ಮತ್ತು ಲೋಕೇಶ್ ನಾಯ್ಕ ಅವರ ದೇಹಗಳ ನಾಪತ್ತೆಯಾಗಿವೆ. ಅವರಿಗಾಗಿ ಶೋಧ ನಡೆಯಬೇಕಾಗಿದೆ. ಈಗ ಅನುಕೂಲ ವಾತಾವರಣ ವಿದ್ದರೂ ಯಾಕೆ ಜಿಲ್ಲಾಡಳಿತ ಲಕ್ಷ್ಯ ಹಾಕುತ್ತಿಲ್ಲ ಎಂಬುದು ಜನರು ಯೋಚಿಸುವಂತಾಗಿದೆ.