ಶಿರಸಿ : ಹಿರಿಯ ಪತ್ರಕರ್ತ, ಉದಯವಾಣಿ ವರದಿಗಾರ ರಾಘವೇಂದ್ರ ಬೆಟ್ಟಕೊಪ್ಪ ಅವರು ಮಾಧ್ಯಮ ಶ್ರೀ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿರಸಿಯ ತಾಲೂಕಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷವೂ ಈ ಪ್ರಶಸ್ತಿಯನ್ನ ನೀಡುತ್ತಾ ಬರಲಾಗಿದೆ. ಜಿಲ್ಲಾ ಪತ್ರಿಕಾ ಭವನದಲ್ಲಿ ತಾಲೂಕಾ ಅಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಘೋಷಿಸಲಾಯಿತು.
ಕಳೆದ 23 ವರ್ಷದಿಂದ ನಿರಂತರ ಪತ್ರಿಕೋದ್ಯಮದಲ್ಲಿ ಉಪ ಸಂಪಾದಕ, ವರದಿಗಾರನಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಬೆಟ್ಟಕೊಪ್ಪ 1995-96ರ ಹೈಸ್ಕೂಲ್ ವಿದ್ಯಾರ್ಥಿ ಜೀವನದ ವೇಳೆಗೆ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ನುಡಿಚಿತ್ರ ಬರೆದು ಗಮನ ಸೆಳೆಯುತ್ತಾ ಬಂದಿದ್ದಾರೆ. ಜನಮಾಧ್ಯಮ ಹಾಗೂ ಧೈಯನಿಷ್ಠ ಪತ್ರಕರ್ತ, ಲೋಕಧ್ವನಿ ಪತ್ರಿಕೆಗಳಿಗೆ ವರದಿ, ಅಂಕಣ ಬರೆಯುತ್ತಿದ್ದರು.
2001ರಿಂದ ವಿವಿಧ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಬೆಟ್ಟಕೊಪ್ಪ ಕಳೆದ 17 ವರ್ಷಗಳಿಂದ ಉದಯವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಾಂಸ್ಕೃತಿಕ, ಸಾಹಿತ್ಯ, ಕೃಷಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ಈಗಾಗಲೇ ಮೂರು ಕೃತಿಗಳನ್ನೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಇವರ ಬರಹಗಳಿಗೆ ನಾಲ್ಕು ಸಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ನುಡಿಚಿತ್ರ ಪ್ರಶಸ್ತಿ, ಜಿಲ್ಲಾ ಪತ್ರಿಕಾ ಸಂಘವು ನೀಡುವ ಅಜ್ಜಿಬಳ ಹೆಗಡೆ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಲಭಿಸಿರುವುದು ಗಮನಾರ್ಹವಾಗಿದೆ.
ಮಾದ್ಯಮ ಶ್ರೀ ಪ್ರಶಸ್ತಿಯನ್ನು ಆಗಸ್ಟ್ ತಿಂಗಳಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತಿದೆ.