ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ಜಿಲ್ಲೆಯಲ್ಲಿ
ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಿಯುತ ಹಾಗೂ ಪರಿಸರ ಸ್ನೇಹಿ ಆಚರಣೆಗೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಿಓಪಿ ಗಣೇಶ ಮೂರ್ತಿ(POP Ganesh Idol) ಪ್ರತಿಷ್ಠಾಪನೆ ಮತ್ತು ಡಿಜೆ ಬಳಕೆಯನ್ನು ಕಟ್ಟುನಿಟ್ಟಾಗಿ
ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ (DC K Lakshmipriya) ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (POP)ತಯಾರಿಸಿದ ಮೂರ್ತಿಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಪರಿಸರ ಸ್ನೇಹಿ(Eco Friendly) ಗಣೇಶ ಮೂರ್ತಿಗಳು ಹಾಗೂ ಪ್ಲಾಸ್ಟಿಕ್ ರಹಿತ ಅಲಂಕಾರಿಕ ವಸ್ತುಗಳನ್ನೇ ಬಳಸಬೇಕು. ಧ್ವನಿವರ್ಧಕ ಬಳಕೆಗೆ ಪೊಲೀಸ್ ಅನುಮತಿ ಕಡ್ಡಾಯವಾಗಿದ್ದು, ಡಿ.ಜೆ.ಬಳಸುವಂತಿಲ್ಲ. ಸೌಂಡ್ ಸ್ವೀಕರ್‌ಗಳನ್ನು ವಸತಿ ಪ್ರದೇಶದಲ್ಲಿ 55 ಡೆಸಿಬಲ್ ಹಾಗೂ
ಶಾಲೆ/ಆಸ್ಪತ್ರೆಗಳಂತಹ ಸೂಕ್ಷ್ಮ ವಲಯಗಳಲ್ಲಿ ಗರಿಷ್ಠ 50 ಡೆಸಿಬಲ್ ಶಬ್ದಮಿತಿಯನ್ನು ಪಾಲಿಸಬೇಕು. ರಾತ್ರಿ 10 ಗಂಟೆಯ ನಂತರ ಯಾವುದೇ ರೀತಿಯ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ಮೆರವಣಿಗೆ ಮತ್ತು ಧ್ವನಿವರ್ಧಕಗಳ ಬಳಕೆಯ ಅನುಮತಿಗೆ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ‘ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿರುವ ಎಲ್ಲಾ ಇಲಾಖೆಗಳ ನಿರಾಪೇಕ್ಷಣಾ ಪತ್ರಗಳನ್ನು ಇಲ್ಲಿಂದಲೇ ಪಡೆಯಬಹುದು. ಜಿಲ್ಲೆಯಾದ್ಯಂತ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಸೂಕ್ತ ಸ್ಥಳೀಯ ಅನುಮತಿಗಳೊಂದಿಗೆ ಮೆರವಣಿಗೆ ನಡೆಸಲು ಸೂಚಿಸಲಾಗಿದೆ ಎಂದರು.
ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವ ಸ್ಥಳಗಳಲ್ಲಿ ಜೆಸಿಬಿ, ಅಗ್ನಿಶಾಮಕ ದಳ, ಹೆಸ್ಕಾಂ ಸಿಬ್ಬಂದಿ ಹಾಗೂ ಪರಿಣಿತ ಈಜುಗಾರರನ್ನು ನಿಯೋಜಿಸಲಾಗಿದ್ದು, ಜಿಲ್ಲೆಯ 50ಕ್ಕೂ ಹೆಚ್ಚು ಅಧಿಕೃತ ಸ್ಥಳಗಳಲ್ಲಿ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಅಧಿಕೃತ ಮಳಿಗೆಗಳಿಂದ ‘ಹಸಿರು ಪಟಾಕಿ'ಗಳನ್ನು ಮಾತ್ರ ಖರೀದಿಸಬೇಕೆಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಕಾನೂನು ಚೌಕಟ್ಟಿನಲ್ಲಿ ಆಚರಿಸಲು ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಭಟ್ಕಳ ಉಪವಿಭಾಗ 392, ಕಾರವಾರ ಹಾಗೂ ಅಂಕೋಲಾ ತಾಲೂಕುಗಳಲ್ಲಿ 131, ಶಿರಸಿ ಉಪವಿಭಾಗ 668, ದಾಂಡೇಲಿ, ಹಳಿಯಾಳ ಹಾಗೂ
ಜೋಯಿಡಾ 301 ಸೇರಿದಂತೆ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಕಳೆದ ಬಾರಿಯ ಗಣೇಶೋತ್ಸವ ಹಾಗೂ ಮೆರವಣಿಗೆ ವೇಳೆ ಗಲಾಟೆ, ಅಶಾಂತಿ ಸೃಷ್ಟಿಸಿದ್ದ ಆರೋಪಿಗಳು ಮತ್ತು ಗಲಭೆಕೋರರ ವಿರುದ್ಧ ಬಿ.ಎನ್.ಎಸ್ ಕಾಯ್ದೆಯಡಿ ಪ್ರಿವೆಂಟಿವ್ ಆಕ್ಷನ್ ರಿಪೋರ್ಟ್ ದಾಖಲಿಸಿ ಕಟ್ಟುನಿಟ್ಟಿನ ‘ಬಾಂಡ್ ಓವರ್' ಮಾಡಿಸಲಾಗಿದೆ.
ಜಿಲ್ಲೆಯ ಶೇ. 95 ರಷ್ಟ್ಟು ಗಣೇಶ ಮೂರ್ತಿಗಳು 11ನೇ ದಿನದ ಒಳಗಾಗಿ ವಿಸರ್ಜನೆಯಾಗಲಿವೆ. ಗರಿಷ್ಠ ಸಂಖ್ಯೆಯ ವಿಸರ್ಜನೆಗಳು 5ನೇ ದಿನ (449) ಹಾಗೂ 11ನೇ ದಿನ (143) ನಡೆಯಲಿದ್ದು, ಹೆಚ್ಚುವರಿ ಭದ್ರತೆಗಾಗಿ 400 ಗೃಹರಕ್ಷಕರು, 15 ಡಿ.ಎ.ಆರ್ ತುಕಡಿ ಮತ್ತು ಕೆ.ಎಸ್.ಆರ್.ಪಿ ತುಕಡಿಗಳನ್ನೂ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನೂ ಕೂಡ ಅಗತ್ಯವಿರುವಡೆಗಳಲ್ಲಿ ನಿಯೋಜಿಸಲಾಗುವುದು ಎಂದು ತಿಳಿಸಿದ ಎಸ್ಪಿ, ಮೆರವಣಿಗೆ ಹಾಗೂ ಸಭಾಂಗಣಗಳಲ್ಲಿ ನಿಗದಿಪಡಿಸಿದ ಶಬ್ದಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಶಬ್ದಮಾಲಿನ್ಯ ನಿಯಂತ್ರಿಸಲು ಸಾರ್ವಜನಿಕ ದೂರುಗಳು ಬಂದ ತಕ್ಷಣ ಪೊಲೀಸ್ ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿ ಜೊತೆಗೂಡಿ ಪೊಲೀಸರು ರಾಂಡಮ್ ಆಗಿ ಧ್ವನಿವರ್ಧಕಗಳ ಶಬ್ದಮಿತಿಯನ್ನು ತಪಾಸಣೆ ನಡೆಸಲಿದ್ದಾರೆ. ಹಬ್ಬದ ಅವಧಿಯಲ್ಲಿ ಯಾವುದೇ ತುರ್ತು ಪರಿಸ್ಥಿತಿ ಅಥವಾ ದೂರುಗಳನ್ನು ತಕ್ಷಣವೇ ನಿರ್ವಹಿಸಲು ಅಗ್ನಿಶಾಮಕ ಹಾಗೂ ವೈದ್ಯಕೀಯ ಸಿಬ್ಬಂದಿ ಒಳಗೊಂಡ ‘ಕ್ವಿಕ್ ರೆಸ್ಪಾನ್ಸ್ ಟೀಮ್ ಸದಾ ಸಜ್ಜಾಗಿರಲಿದೆ ಎಂದರು.
ಮೆರವಣಿಗೆಯಲ್ಲಿ ಡಿ.ಜೆ. ಬದಲಿಗೆ ಸ್ಥಳೀಯ ಕಲಾವಿದರು ಕಲಾತಂಡಗಳಿಂದ ಜಿಲ್ಲೆಯ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಆಯೋಜಿಸಬಹುದಾಗಿದೆ . ಎಲ್ಲಾ ಆಯೋಜಕರು ಪೊಲೀಸ್ ಇಲಾಖೆ ವತಿಯಿಂದ ನೀಡುವ ಸೂಚನೆಗಳನ್ನು ಪಾಲಿಸಿ, ಅಗತ್ಯ ಸಹಕಾರ ನೀಡಬೇಕು ಎಂದರು.
ಗಣಪತಿ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಅಗತ್ಯ ಭದ್ರತೆ ನೀಡುವಂತೆ ಮತ್ತು ಗುಂಡಿಗಳಿಂದ ಕೂಡಿರುವ ರಸ್ತೆಯನ್ನು ಸರಿಪಡಿಸುವಂತೆ ಆಯೋಜಕರು ಕೋರಿದರು. ಅಗತ್ಯವಿರುವಡೆಗಳನ್ನು ತಾತ್ಕಾಲಿಕ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಕಾರವಾರ ಉಪ ವಿಭಾಗಾಧಿಕಾರಿ ರಮ್ಯಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಭಟ್ಕಳ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾನು ಗುಪ್ತ ಹಾಗೂ ವಿವಿಧ ಇಲಾಖೆಗಳ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು, ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾರ್ವಜನಿಕರು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು.