ನವದೆಹಲಿ: 18 ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಸೋಮವಾರ ಆರಂಭವಾಗುತ್ತಿದೆ. ಸಂಸತ್ ಅಧಿವೇಶನದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಂಡಲ ಸೇರಿದಂತೆ ಹೊಸದಾಗಿ ಆಯ್ಕೆಯಾದ 280 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನಾಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಜೊತೆಗೆ ಉಳಿದ 264 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 26 ರಂದು ಲೋಕಸಭಾ ಸ್ಪೀಕರ್ ಆಯ್ಕೆ ಮತ್ತು ಜೂನ್ 27 ರಂದು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ.
ಅಗಲಿದ ಗಣ್ಯರಿಗೆ ಮೌನ ಆಚರಿಸುವುದರ ಮೂಲಕ ಕಲಾಪ ಆರಂಭವಾಗಲಿದೆ. ಮೊದಲಿಗೆ ಲೋಕಸಭೆಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವಂತೆ ಹಂಗಾಮಿ ಸ್ಪೀಕರ್ ಕರೆ ನೀಡಲಿದ್ದಾರೆ.
ಜೂನ್ 28ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯು ಪ್ರಾರಂಭವಾಗಲಿದ್ದು, ಜುಲೈ 2 ಅಥವಾ 3ರಂದು ಪ್ರಧಾನಿ ಅವರು ಚರ್ಚೆಗೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ನಂತರ ಎರಡೂ ಸದನಗಳನ್ನು ಸಂಕ್ಷಿಪ್ತ ಅವಧಿಗೆ ಮುಂದೂಡಲಾಗುತ್ತದೆ. ಕೇಂದ್ರ ಬಜೆಟ್ ಮಂಡನೆಗಾಗಿ ಜುಲೈ 22ರಂದು ಮತ್ತೆ ಸದನದ ಕಲಾಪ ನಡೆಯುವ ಸಾಧ್ಯತೆಯಿದೆ.
ಸ್ಪೀಕರ್ಬಗ್ಗೆಗದ್ದಲಸಾಧ್ಯತೆ : ಕಳೆದ ವಾರದ ರಾಷ್ಟ್ರಪತಿಗಳು ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದರು. ಏಳು ಬಾರಿ ಸಂಸದರಾಗಿ ಕೆಲಸ ಮಾಡಿದ ಬಿಜೆಪಿಯ ಭರ್ತೃಹರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದಕ್ಕೆ ವಿರೋಧ ಮತ್ತು ಗದ್ದಲ ಉಂಟಾಗಿದೆ. ಈ ನಡುವೆ ನೂತನ ಸ್ಪೀಕರ್ ಆಯ್ಕೆಯ ತನಕ ಸದನದ ಕಲಾಪಗಳನ್ನು ಮಹತಾಬ್ ನಿರ್ವಹಿಸಲಿದ್ದಾರೆ. ಹಂಗಾಮಿ ಸ್ಪೀಕರ್ ನೇಮಕ ಕುರಿತ ಇಂದು ಸದನದಲ್ಲಿ ಗದ್ದಲ ಹೆಚ್ಚಾಗುವ ಸಾಧ್ಯತೆ ಇದೆ.
ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಉಪ ಸಭಾಧ್ಯಕ್ಷ ಸ್ಥಾನವನ್ನು ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಬಿಟ್ಟು ಕೊಡುವಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.