ಮುಂಡಗೋಡು : ಪೊಲೀಸ್ ಸಿಬ್ಬಂದಿಯೋರ್ವ ಯುವತಿಯೋರ್ವಳಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಕುರಿತು ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಂಡಗೊಡ ಪೊಲೀಸ್ ಠಾಣೆ ಕಾನ್ಸ್ಟೆಬಲ್ ಗಿರೀಶ್ ಎಸ್ ಎಮ್ ವಿರುದ್ಧ ಹಾಸನ ಮೂಲದ ಸುಚಿತ್ರಾ ಎಂಬುವವರು ದೂರು ದಾಖಲಿಸಿದ್ದಾರೆ.
ಹಾಸನ ಜಿಲ್ಲಾ ಚೆನ್ನರಾಯಪಟ್ಟಣ ಮೂಲದ ಸುಚಿತ್ರಾ ಅವರ ಪರಿಚಯ ಮಾಡಿಕೊಂಡ ಗಿರೀಶ್ 2018ರ ಏಪ್ರಿಲ್ ತಿಂಗಳಿಂದ 2023 ಆಗಸ್ಟ್ ವರೆಗೆ ಒಟ್ಟು 18 ಲಕ್ಷ ರೂ. ಹಣ ಪಡೆದಿದ್ದ. ನನಗೆ ಮನೆಗೆ ಕಟ್ಟಲು ಹಣದ ಅವಶ್ಯಕತೆ ಇದೆ. ಮುಂದೆ ನಿನ್ನನ್ನ ಮದುವೆಯಾಗುತ್ತೇನೆ ಎಂದು ಸುಚಿತ್ರಳನ್ನ ನಂಬಿಸಿದ್ದ.
ಬಳಿಕ ಮದುವೆ ಆಗುವುದಿಲ್ಲ ಎಂದು ಗಿರೀಶ್ ನೇರವಾಗಿ ಹೇಳಿದ್ದ. ಈ ಬಗ್ಗೆ ಸುಚಿತ್ರಾ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಿದ್ದಳು. ಆಗ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಗಿರೀಶ್ ಹಣ ಹಿಂತಿರುಗಿಸುವುದಾಗಿ ಒಪ್ಪಿಕೊಂಡಿದ್ದ. ಆದರೆ ಇದುವರೆಗೂ ಯುವತಿಗೆ ಹಣ ಹಿಂತಿರುಗಿಸದ ಹಿನ್ನೆಲೆಯಲ್ಲಿ ಮುಂಡಗೊಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.