ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಶಿರಸಿ/ಸಿದ್ಧಾಪುರ (Sirsi /Siddapur): ಸರ್ಕಾರಿ ಬಸ್ ಅನ್ನು ಅಡ್ಡಗಟ್ಟಿ, ಚಾಲಕ ಹಾಗೂ ಕಂಡಕ್ಟರ್‌ಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಿದ್ಧಾಪುರ ಪೊಲೀಸರು(Siddapur) ಘಟನೆ ನಡೆದ 24 ಗಂಟೆಗಳ ಒಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಶಿರಸಿಯ ಮರಾಠಿಕೊಪ್ಪದ ಸಂದೀಪ ಲಕ್ಷ್ಮಣ ವಾಲ್ಮೀಕಿ, ಸೈಫ್ ಅಲಿ ಸಯ್ಯದ್ ಅಲಿ ಹಾಗೂ ಮರಿಗುಡ್ಡೆಯ ಹರ್ಷವರ್ಧನ ಕೃಷ್ಣಾ ನಾಯ್ಕ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 01 ರಂದು ಶಿರಸಿ-ಸಿದ್ಧಾಪುರ-ಸಾಗರ (Sirsi-Siddapur-Sagar) ಮಾರ್ಗದ ರೂಟ್ ನಂ. 55ರ ಸರ್ಕಾರಿ ಬಸ್‌ನಲ್ಲಿ (KA-31 F-1658) ಚಾಲಕರಾದ ಭಾಸ್ಕರ ಮಂಜುನಾಥ ಪಟಗಾರ (49) ಅವರು ಸಿದ್ಧಾಪುರ ಕಡೆಯಿಂದ ಶಿರಸಿ(Siddapur to Sirsi) ಕಡೆಗೆ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಸಿದ್ಧಾಪುರ ತಾಲೂಕಿನ 16ನೇ ಮೈಲಿಗಲ್ಲಿನ ಬಳಿ ಕಿರಿದಾದ ಸೇತುವೆ ಇದ್ದಿದ್ದರಿಂದ, ಬಸ್ಸಿನ ಹಿಂಬದಿಯಿಂದ ಬರುತ್ತಿದ್ದ ಒಮ್ನಿ ವಾಹನಕ್ಕೆ (KA-07 M-4479) ತಕ್ಷಣವೇ ದಾರಿ ಬಿಡಲು ಸಾಧ್ಯವಾಗಿರಲಿಲ್ಲ. ಮುಂದೆ ತೆರಳಿದ ಬಳಿಕ ಬಸ್ ಚಾಲಕ ಒಮ್ನಿಗೆ ದಾರಿ ಬಿಟ್ಟಿದ್ದರು.
ಈ ವಿಚಾರವನ್ನೇ ನೆಪವಾಗಿಟ್ಟುಕೊಂಡು ಕೋಪಗೊಂಡ ಒಮ್ನಿಯಲ್ಲಿದ್ದವರು, ಸಿದ್ಧಾಪುರದ ನಾಣಿಕಟ್ಟ ಬಳಿ ಬಸ್ ಅನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದ್ದಾರೆ. ಬಳಿಕ ಬಸ್ಸಿನ ಗ್ಲಾಸ್ ಒಡೆದು, ಬಸ್ ಕಂಡಕ್ಟರ್ ಗಣೇಶ್ ನಾಯ್ಕ್ ಹಾಗೂ ಚಾಲಕ ಭಾಸ್ಕರ ಅವರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಲು ಯತ್ನಿಸಿ, ಜೀವ ಬೆದರಿಕೆ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ತ್ವರಿತ ಕಾರ್ಯಾಚರಣೆ – ನ್ಯಾಯಾಂಗ ಬಂಧನ: ಈ ಕುರಿತು ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಗುನ್ನಾ ನಂ. 204/2026) ದಾಖಲಿಸಿಕೊಂಡ ಪೊಲೀಸರು, ವಿಶೇಷ ತಂಡ ರಚಿಸಿ ತ್ವರಿತ ಕಾರ್ಯಾಚರಣೆ ನಡೆಸಿ 24 ಗಂಟೆಗಳ ಒಳಗಾಗಿ ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಹಾಗೂ ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿದ್ಧಾಪುರ ಠಾಣೆಯ ಪಿಐ ಜಿ.ಎ. ಸೀತಾರಾಮ ಅವರ ನೇತೃತ್ವದ ಪೊಲೀಸ್ ಸಿಬ್ಬಂದಿ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.