ಭಟ್ಕಳ : ತಾಲೂಕಿನ ಸುಪ್ರಸಿದ್ಧ ಮಾರಿಜಾತ್ರೆಯು ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಗುರುವಾರ ಮಾರಿಯಮ್ಮನ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು. ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಎಸ್ಪಿ  ನಾರಾಯಣ ಅವರು ಗುಡಿಗೆ ಆಗಮಿಸಿ ದರ್ಶನ ಪಡೆದರು.

ಸಂಜೆ ಮಾರಿ ಗುಡಿಯಿಂದ ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಸಾವಿರಾರು ಭಕ್ತರು ಬೃಹತ್‌ ಮೆರವಣಿಗೆಯಲ್ಲಿ ಹೊತ್ತೊಯ್ದು ಜಾಲಿಕೋಡಿ ಸಮುದ್ರದ ಕಡೆ ಮೆರವಣಿಗೆಯಲ್ಲಿ ಕೊಂಡೋಯ್ದರು.

ಸಂಜೆ  ತಾಯಿಗೆ ವಿಸರ್ಜನಾ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸುರಿಯುವ ಮಳೆಯನ್ನ ಲೆಕ್ಕಿಸದೆ ಮಾರಿ ಮೂರ್ತಿಯನ್ನು ಮೆರವಣಿಗೆ ಮೂಲಕ ಭಕ್ತರು ತಲೆ ಮೇಲೆ ಹೊತ್ತು ಸಾಗಿದರು. ಸುಮಾರು ಎಂಟು ಕಿಮೀ ದೂರದ ಮೆರವಣಿಗೆಯಲ್ಲಿ ಸಾವಿರಾರು ಜನರು ಉತ್ಸಾಹದಿಂದ ಹೆಜ್ಜೆ ಹಾಕಿದರು.  ಮಾರಿ ಸಾಗುವ ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಭಕ್ತರು ನಿಂತು ದೇವಿಯ ದರ್ಶನ ಪಡೆದರು. ಕೊನೆಯಲ್ಲಿ ಜಾಲಿ ಕೋಡಿ ಸಮುದ್ರದಲ್ಲಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಮಾರಿ ಮೂರ್ತಿಯ ಅಂಗಾಂಗಳನ್ನು ಬೇರ್ಪಡಿಸಿ ವಿಸರ್ಜನೆ ಮಾಡಲಾಯಿತು.

ವರ್ಷಂಪ್ರತಿಯಂತೆ ಎರಡು ದಿನಗಳ ಕಾಲ ನಡೆದ ಜಾತ್ರೆಯ ಮೊದಲ ದಿನ ತಾಲೂಕಿನ ಗ್ರಾಮೀಣ ಭಾಗದ ಸಾವಿರಾರು ಭಕ್ತರು ಮಾರಿ ಮಂದಿರದಲ್ಲಿ ಪೂಜೆಯನ್ನು ಸಲ್ಲಿಸಿ ಹರಕೆ ಕಾಣಿಕೆಗಳನ್ನು ಅರ್ಪಿಸಿದರು. ಎರಡನೇ ದಿನ‌‌ ನಗರದ ಭಕ್ತರು‌ ಹಬ್ಬ ಆಚರಿಸಿದರು. ಲಕ್ಷಾಂತರ ಜನರು ಅತ್ಯಂತ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಮಾರಿಯ ದರ್ಶನ ಪಡೆದು ಪುನೀತರಾದರು.

ಎರಡು ದಿನಗಳ ಕಾಲ ಭಕ್ತರು ಮಾರಿಯಮ್ಮನಿಗೆ ಹೂವು, ಹಣ್ಣು-ಕಾಯಿ, ತೊಟ್ಟಿಲು, ಹೂವಿನ ಪೇಟ, ಕಣ್ಣು ಇತ್ಯಾದಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು. ಯಾವುದೇ ರೋಗಬಾಧೆ ಬಾರದಂತೆ ದೇವಿಯಲ್ಲಿ ಪ್ರಾರ್ಥಿಸಿಕೊಂಡರು.