ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಬೆಂಗಳೂರು(Bangalore) : ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆ ಹಾಗೂ ಶ್ಲಾಘನೀಯ ಕಾರ್ಯವನ್ನು ಪರಿಗಣಿಸಿ ನೀಡಲಾಗುವ ಪ್ರತಿಷ್ಠಿತ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು (ಡಿ.ಜಿ. & ಐ.ಜಿ.ಪಿ) ಅವರ‌ ಶ್ಲಾಘನಾ ಚಿನ್ನದ ಪದಕಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯ(Siddapur Police Station) ತನಿಖಾ ಪಿಎಸ್‌ಐ ನಾಗಪ್ಪ ಅವರು ಆಯ್ಕೆಯಾಗಿದ್ದಾರೆ.

ಅದೇ ರೀತಿ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ಸೇವೆಯ ಮೂಲಕ ಗುರುತಿಸಿಕೊಂಡಿರುವ ಭಟ್ಕಳ ನಗರ ಪೊಲೀಸ್ ಠಾಣೆಯ(Bhatkal Police Station) ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕ ಅವರಿಗೆ 2025–26ನೇ ಸಾಲಿನ ಡಿಜಿ ಮತ್ತು ಐಜಿಪಿ ಶ್ಲಾಘನಾ ಪದಕ ಲಭಿಸಿದೆ.

ಪ್ರಸ್ತುತ ಸಿದ್ದಾಪುರ ಠಾಣೆಯಲ್ಲಿ ಪಿಎಸ್ಐ ಅಗಿರುವ ನಾಗಪ್ಪ ಅವರು  ತಮ್ಮ ಸೇವಾ ಅವಧಿಯಲ್ಲಿ ಹಲವು ಸಂಕೀರ್ಣ ಹಾಗೂ ಸವಾಲಿನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  ಇಲಾಖೆಯಲ್ಲಿ ಕರ್ತವ್ಯನಿಷ್ಠೆ ಹಾಗೂ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಗೌರವ ಲಭಿಸಿದೆ.

ಇದಕ್ಕೂ ಮುನ್ನ ಶಿರಸಿ(Sirsi) ನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅವರ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿಗಳ ಚಿನ್ನದ ಪದಕ(CM Gold Medal) ನೀಡಿ ಸನ್ಮಾನಿಸಲಾಗಿತ್ತು. ಪೊಲೀಸ್ ಸೇವೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿರುವ ನಾಗಪ್ಪ ಅವರು ಭರವಸೆಯ ಸಾಹಿತಿಯಾಗಿಯೂ ಹೆಸರು ಮಾಡಿದ್ದಾರೆ.

ಪ್ರತಿಷ್ಠಿತ ಡಿ.ಜಿ. ಹಾಗೂ ಐ.ಜಿ.ಪಿ(DG & IGP) ಚಿನ್ನದ ಪದಕಕ್ಕೆ ಆಯ್ಕೆಯಾಗಿರುವ ಪಿಎಸ್‌ಐ ನಾಗಪ್ಪ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ‌ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಸೇರಿದಂತೆ ಪೊಲೀಸ್ ಇಲಾಖೆಯ(Police Department) ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಭಟ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕ ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಕಾರ್ಯಕ್ಷಮತೆಯಿಂದ ವಿಶೇಷ ಕಾರ್ಯವನ್ನು  ಮಾಡಿದ್ದಾರೆ. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.


ಸೇವಾ ಅವಧಿಯಲ್ಲಿ ಹಲವು ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿರುವ ಅವರು, ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ, ಸಾರ್ವಜನಿಕ ದೂರುಗಳ ತ್ವರಿತ ವಿಲೇವಾರಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಅವರ ಸಾಧನೆಗೆ ಪೊಲೀಸ್ ಇಲಾಖೆ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರಿಂದ  ಅಭಿನಂದನೆ ವ್ಯಕ್ತವಾಗಿದೆ.

ಇದನ್ನು ಓದಿ : ಕುಮಟಾದಲ್ಲಿ ಹೊಟೇಲ್ ಮಾಲೀಕನ ದರ್ಪ. ಅಲೆಮಾರಿ ದಂಪತಿ ಮೇಲೆ ಹಲ್ಲೆ. ಸಾರ್ವಜನಿಕರ ಆಕ್ರೋಶ.