ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಸೋಶಿಯಲ್ ಮೀಡಿಯಾದಲ್ಲಿ(Social Media) ಪರಿಚಯವಾದ ವ್ಯಕ್ತಿಯೊಬ್ಬನನ್ನು ನಂಬಿದ ಕಾರವಾರದ(Karwar) ಇಳಿ ವಯಸ್ಸಿನ ಮಹಿಳೆಯೊಬ್ಬರು ಭಾರಿ ಡಿಜಿಟಲ್ ವಂಚನೆಗೆ(Digital Scam) ಒಳಗಾಗಿದ್ದಾರೆ. ಪ್ರಕರಣದಲ್ಲಿ ಬರೋಬ್ಬರಿ 1.54 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ನಗರದ ಕಾಯ್ಕಿಣಿ ರಸ್ತೆಯ(Kaikini Road) ನಿವಾಸಿ ಶೈಲಾ ನಾಯಕ ಎಂಬುವವರೇ ತಮ್ಮ ಇಡೀ ಜೀವನಮಾನದ ದುಡಿತದ ಹಣವನ್ನೆಲ್ಲ ಕಳೆದುಕೊಂಡಿದ್ದಾರೆ. 2025ರ ಡಿಸೆಂಬರ್ ತಿಂಗಳಲ್ಲಿ ಫೇಸ್ಬುಕ್ನಲ್ಲಿ(Facebook) ಪರಿಚಯವಾದ ‘ಡಾ. ಸಾಂಟೋ ನಿಕ್ಕೊ’ ಎಂಬಾತ ತಾನು ಇಟಲಿ ಮೂಲದವನು, ಸದ್ಯ ಜರ್ಮನಿಯಲ್ಲಿ(Germany) ಪ್ಲಾಸ್ಟಿಕ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದನು.
ಬಳಿಕ ವಾಟ್ಸಾಪ್(Whatsapp) ಮೂಲಕ ಶೈಲಾ ಅವರ ಜೊತೆ ನಿಕಟ ಸಂಪರ್ಕ ಬೆಳೆಸಿದ ಆತ, ತನಗೆ ಮಲೇಷ್ಯಾದಲ್ಲಿ 5 ಕೋಟಿ ರೂ. ಸಂಬಳದ ಕೆಲಸ ಸಿಕ್ಕಿದೆ ಎಂದು ನಂಬಿಸಿದ್ದನು. ಸುಳ್ಳು ಕಥೆಗಳನ್ನು ಹೆಣೆದ ವಂಚಕ, ತಾಯಿಯ ಚಿಕಿತ್ಸೆಗೆ 2 ಲಕ್ಷ ರೂ., ತನಗಾದ ಅಪಘಾತದ ಚಿಕಿತ್ಸೆಗೆ 31 ಲಕ್ಷ ರೂ., ಭಾರತಕ್ಕೆ ತಂದ ಕೋಟ್ಯಂತರ ಹಣವನ್ನು ದೆಹಲಿ(Delhi) ಏರ್ಪೋರ್ಟ್ನಲ್ಲಿ ಬಿಡಿಸಿಕೊಳ್ಳಲು ಹಾಗೂ ತೆರಿಗೆ ರೂಪದಲ್ಲಿ 76 ಲಕ್ಷ ರೂ. ಪಡೆಯುವುದರ ಜೊತೆಗೆ, ಅಧಿಕಾರಿಗಳಿಗೆ ಲಂಚ ನೀಡಲು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲು ಕೊನೆಗೆ ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.
ಮಹಿಳೆಯ ಅತಿಯಾದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಆತ, ಕಳೆದ ಏಳು ತಿಂಗಳ ಅವಧಿಯಲ್ಲಿ ಒಟ್ಟು 6 ಬಾರಿ ವಿವಿಧ ನೆಪ ಹೇಳಿ ಶೈಲಾ ಅವರಿಂದ ಒಟ್ಟು 1,54,14,161 ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಹಣ ಪಡೆದು ಹಲವು ತಿಂಗಳುಗಳು ಕಳೆದರೂ ಆತ ಭಾರತಕ್ಕೂ ಬರದೆ, ಇತ್ತ ಹಣವನ್ನೂ ಮರಳಿಸದೇ ಕೈಕೊಟ್ಟಾಗಲೇ ತಾನು ಬೃಹತ್ ವಂಚನೆಗೆ ಒಳಗಾಗಿರುವುದು ಮಹಿಳೆಗೆ ಅರಿವಾಗಿದೆ. ಹೀಗಾಗಿ ಆಕೆ ಪೊಲೀಸರ ಮೋರೆ ಹೋಗಿದ್ದಾಳೆ.
