ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ರೌಡಿಶೀಟರ್‌ಗಳ ನಡುವಿನ ಗಲಾಟೆ ಬಿಡಿಸಲು ತೆರಳಿದ್ದ ಇಬ್ಬರು ಪೊಲೀಸರಿಗೆ ಚಾಕು ಇರಿದ ಘಟನೆ ಉತ್ತರಕನ್ನಡ(Uttarkannada) ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ(Bhatkal Taluku Murdeshwar) ತಡರಾತ್ರಿ ನಡೆದಿದೆ.
ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್‌ಟೇಬಲ್ ವಿನಾಯಕ್ ಶಟ್ಟಿ ಚಾಕು ಇರಿತಕ್ಕೊಳಗಾದ ಪೊಲೀಸರು. ರೌಡಿಶೀಟರ್(Rowdysheeter) ರಾಜು ಹಾಗೂ ಆತನ ಗುಂಪು ಮನೋಜ್ ಎಂಬಾತನೊಂದಿಗೆ ತಡರಾತ್ರಿ ಜಗಳವಾಡುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ತೆರಳಿದ ಹವಾಲ್ದಾರ್ ಸಂಗಪ್ಪ ಮತ್ತು ಕಾನ್ಸ್‌ಟೇಬಲ್ ವಿನಾಯಕ್ ಶೆಟ್ಟಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ರೌಡಿಶೀಟರ್ ರಾಜು ಹಾಗೂ ಆತನ ಗುಂಪು ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮನೋಜ್ ಎಂಬಾತನಿಗೂ ಚಾಕು ಇರಿತವಾಗಿದೆ.
ಗಂಭೀರವಾಗಿ ಗಾಯಗೊಂಡ ಇಬ್ಬರು ಪೊಲೀಸರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೋಜ್ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು, ರಿತೀಕ್, ಮದನ್ ನಾಯ್ಕ, ಯೋಗೇಶ್ ಹಾಗೂ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆ. ರೌಡಿಶೀಟರ್ ರಾಜು ಹಾಗೂ ಮನೋಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
