ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ತಾಲೂಕಿನ ಹೆಬ್ಬುಳ(Hebbula) ಸಮೀಪದ ರಾಜನಗುಳಿ ಗ್ರಾಮದ(Rajanaguli) ನಾಗೇಂದ್ರ ಗೌಡ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಕನ್ನಡ ಪೊಲೀಸರು(Uttarkannada Police) ತನಿಖೆ ಚುರುಕುಗೊಳಿಸಿದ್ದಾರೆ.
ತನಿಖೆ ವೇಳೆ ನಾಗೇಂದ್ರ ಗೌಡ ನಾಡ ಬಾಂಬ್ ಖರೀದಿಸಿದ್ದ ಮೂಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದಲ್ಲಿ(Honnavar Taluku Chandavar Village) ಮೀನು ಶಿಕಾರಿಗಾಗಿ ನಾಡ ಬಾಂಬ್ ಖರೀದಿಸಿದ್ದ ಎನ್ನಲಾಗಿದೆ.
ಜೂನ್ 27ರಂದು ತುಮಕೂರು ಹೆದ್ದಾರಿಯಲ್ಲಿ(Tumakur Hghway) ನಡೆದಿದ್ದ ಘಟನೆಯಲ್ಲಿ, ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಯುವತಿಯನ್ನು ಕರೆದುಕೊಂಡು ಬರುವಾಗ ಕಾರಿನಲ್ಲೇ ನಾಡ ಬಾಂಬ್ ಸ್ಪೋಟಿಸಿಕೊಂಡು ನಾಗೇಂದ್ರ ಗೌಡ ಮೃತಪಟ್ಟಿದ್ದ.
ಈ ಹಿಂದೆ ಸಹ ನಾಗೇಂದ್ರ ಗೌಡ ನಾಡ ಬಾಂಬ್ಗಳನ್ನು ಮೀನು ಶಿಕಾರಿಗೆ ಬಳಸುತ್ತಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆತ್ಮಹತ್ಯೆಗೂ ಮುನ್ನ ಸ್ನೇಹಿತರ ಜೊತೆ ತೆರಳಿ ಮೂರು ನಾಡ ಬಾಂಬ್ಗಳನ್ನು ಪಡೆದುಕೊಂಡು ಬೆಂಗಳೂರಿನತ್ತ ಪ್ರಯಾಣಿಸಿದ್ದ ಎನ್ನಲಾಗಿದೆ.
ಪ್ರಕರಣದ ತನಿಖೆಯನ್ನು ಪೊಲೀಸರ ವಿಶೇಷ ತಂಡದ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಬಾಂಬ್ ನೀಡಿದವರನ್ನು ಪತ್ತೆ ಹಚ್ಚಿ ಅಂಕೋಲಾ ಪೊಲೀಸರು(Ankola Police) ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಪ್ರಾಣಿ ಶಿಕಾರಿಗೆ ನಾಡ ಬಾಂಬ್ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
