ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ತುಮಕೂರು(Tumakuru) : ಪ್ರೀತಿಯ ವಿಚಾರವಾಗಿ ಉಂಟಾದ ಮನಸ್ತಾಪದಿಂದ ಯುವಕನೋರ್ವ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ಕಾರಿನಲ್ಲೇ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಸಜೀವ ದಹನಗೊಂಡಿರುವ ಭೀಕರ ಘಟನೆ ತುಮಕೂರು (Tumakuru) ಜಿಲ್ಲೆಯ ಕಳ್ಳಂಬೆಳ್ಳ ಪೊಲೀಸ್ ಠಾಣಾ(Kallambella Police Station) ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ಯುವಕನನ್ನು ನಾಗೇಂದ್ರ(30) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಉತ್ತರಕನ್ನಡ(Uttarakannada) ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ(Ankola Agasuru Village) ರಮ್ಯಾ ಉಲ್ಲಾಸ್ (23) ಎಂದು ಗುರುತಿಸಲಾಗಿದೆ. ಆಕೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ವಾಸವಿದ್ದ ರಮ್ಯಾ ಮತ್ತು ನಾಗೇಂದ್ರ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ರಮ್ಯಾಳು ನಾಗೇಂದ್ರನ ಮೊಬೈಲ್ ನಂಬರ್ ಬ್ಲೊಕ್ ಮಾಡಿದ್ದಳು.
ಇವತ್ತು ಬೆಳಗ್ಗೆ ಬೆಂಗಳೂರಿನ ಜಯನಗರದಲ್ಲಿದ್ದ(Bangalore Jayanagar) ರಮ್ಯಾ ವಾಸದ ಕೋಣೆಗೆ ಬಂದ ನಾಗೇಂದ್ರ, ಆಕೆಯೊಂದಿಗೆ ಗಲಾಟೆ ನಡೆಸಿದ್ದಾನೆ. ಜಗಳ ಬಿಡಿಸಲು ಬಂದ ರಮ್ಯಾ ಸ್ನೇಹಿತೆಗೂ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಬಳಿಕ ಬೆಳಗ್ಗೆ ಸುಮಾರು 7 ಗಂಟೆ ವೇಳೆಗೆ ರಮ್ಯಾಳನ್ನು ಬಾಡಿಗೆ ಕಾರಿನಲ್ಲಿ ಅಂಕೋಲಾ(Ankola) ಕಡೆಗೆ ಕರೆದುಕೊಂಡು ಹೊರಟಿದ್ದಾನೆ. ಪ್ರಯಾಣದ ವೇಳೆ ಇಬ್ಬರ ನಡುವೆ ಮತ್ತೆ ಜಗಳವಾಗಿದ್ದು, ಶಿರಾ ತಾಲೂಕಿನ ಜೋಗಿಹಳ್ಳಿ(Shira Taluku Jogihalli) ಬಳಿ ನಾಗೇಂದ್ರ ಏಕಾಏಕಿ ಚಾಕುವಿನಿಂದ ರಮ್ಯಾಳ ತಲೆ ಹಾಗೂ ಕೈಗೆ ಇರಿದಿದ್ದಾನೆ.
ಗಾಬರಿಗೊಂಡ ರಮ್ಯಾ ಕಾರಿನ ಬಾಗಿಲು ತೆರೆದು ಕೆಳಗೆ ಹಾರಿದ್ದಾಳೆ. ತಕ್ಷಣ ಕಾರು ಚಾಲಕ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗೆ ಇಳಿದ ವೇಳೆ ನಾಗೇಂದ್ರ ಕಾರಿನ ಬಾಗಿಲು ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ತನ್ನ ಬಳಿ ತಂದಿದ್ದ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ ಎನ್ನಲಾಗಿದೆ.
ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಾರಿನೊಳಗಿದ್ದ ನಾಗೇಂದ್ರ ಸಜೀವ ದಹನಗೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಘಟನೆ ಕುರಿತು ಮಾತನಾಡಿದ ತುಮಕೂರು ಎಸ್ಪಿ ಅಶೋಕ್ ಕೆ.ವಿ., “ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರೊಂದು ಬೆಂಕಿಗೆ ಆಹುತಿಯಾದ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಾರಿನಲ್ಲಿ ಚಾಲಕ ಹಾಗೂ ಯುವತಿ ರಮ್ಯಾ ಇದ್ದರು. ನಾಗೇಂದ್ರ ಪೆಟ್ರೋಲ್ ಬಾಂಬ್ನ್ನು ತಂದಿದ್ದು, ಉದ್ದೇಶಪೂರ್ವಕವಾಗಿ ಸ್ಫೋಟಿಸಿಕೊಂಡಿರುವುದು ಕಂಡುಬಂದಿದೆ.
ಇಬ್ಬರೂ ಬೆಂಗಳೂರಿನಲ್ಲಿ ವಾಸವಿದ್ದರು. ಇತ್ತೀಚೆಗೆ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ರಮ್ಯಾಳನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದಿರುವುದು ಕಂಡುಬರುತ್ತಿದೆ. ಘಟನೆ ಕುರಿತು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕಳ್ಳಂಬೆಳ್ಳ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
