ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಉತ್ತರಕನ್ನಡ (Uttarkannada) ಜಿಲ್ಲೆಯ ಪ್ರಸಿದ್ಧ ಮತ್ತು ಐತಿಹಾಸಿಕ ಧಾರ್ಮಿಕ ಹಬ್ಬ ಭಟ್ಕಳದ ಮಾರಿ ಜಾತ್ರೆ (Bhatkal Marijatre) ಆಗಸ್ಟ್ 5 ಮತ್ತು 6 ರಂದು ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ.

ಊರಿಗೆ ಬರುವ ರೋಗ-ರುಜಿನಗಳನ್ನು ತಡೆದು ಕಾಪಾಡುವ ಶಕ್ತಿ ದೇವಿಯೆಂದು ನಂಬಿರುವ ಭಕ್ತರು ಸಂಭೃಮದಿಂದ ಎರಡು ದಿನಗಳ ಕಾಲ ಅದ್ದೂರಿಯಿಂದ ಹಬ್ಬ ಆಚರಿಸುತ್ತಾರೆ. ಕರಾವಳಿ ಕರ್ನಾಟಕದ (Karavali Karnataka) ಪ್ರಸಿದ್ಧ ಸಾಂಪ್ರದಾಯಿಕ ಹಬ್ಬವಾಗಿದ್ದು, ಇದು ಊರಿಗೆ ಬರುವ ಕಣ್ಣುಬೇನೆ ಮತ್ತು ಸಿಡುಬಿನಂತಹ ಸಾಂಕ್ರಾಮಿಕ ರೋಗಗಳನ್ನು ತಡೆದು ರಕ್ಷಿಸುವ ಮಾರಿ ದೇವಿ ಎಲ್ಲಾ ರೋಗ-ರುಜಿನಗಳಿಂದ ಕಾಪಾಡುತ್ತಾಳೆ ಎಂಬುದು ಜನರ ಬಲವಾದ ನಂಬಿಕೆ. ಜಾತ್ರಾ ಸಂದರ್ಭದಲ್ಲಿ ಭಕ್ತರು ದೇವಿಗೆ ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂ ಕಟ್ಟು ಹಾಗೂ ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಬೇಡಿಕೊಳ್ಳುತ್ತಾರೆ.

ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಜಾತ್ರೆಯಲ್ಲಿ ವಂಶಪಾರಂಪರ್ಯವಾಗಿ ಮಣ್ಕುಳಿಯ ಆಚಾರ್ಯರ ಮನೆತನದವರು ಮೂರ್ತಿ ರಚನೆ ಕಾರ್ಯ ಮುಗಿಸಿದ್ದಾರೆ. ಆಗಸ್ಟ್ 4ರಂದು ಸಂಜೆ ಸುವಾಸಿನಿ ಪೂಜೆ ನಡೆಯಿತು. ಆಗಸ್ಟ್ 5ರಂದು ಬೆಳಿಗ್ಗೆ ಆಚಾರ್ಯರ ಮನೆತನದಿಂದ ಮಾರಿದೇವಿಯ ಮೂರ್ತಿಯನ್ನು ದೇವಸ್ಥಾನದ ಆಡಳಿತ ಮಂಡಳಿಗೆ ವಿಧಿವತ್ತಾಗಿ ಹಸ್ತಾಂತರಿಸಲಾಯಿತು. ನಸುಕಿನ ಜಾವ ಮಣ್ಕುಳಿಯಿಂದ ಮಾರಿಯಮ್ಮ ತವರುಮನೆಯಿಂದ ರಘುನಾಥ ದೇವಸ್ಥಾನ, ಬಸ್ತಿ ರಸ್ತೆ ಹಾಗೂ ರಥಬೀದಿ ಮಾರ್ಗವಾಗಿ ಭಕ್ತಿಪೂರ್ವಕ ಮೆರವಣಿಗೆಯಲ್ಲಿ ಮೂರ್ತಿಯನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಬುಧವಾರ ಬೆಳಿಗ್ಗೆ ಸುಮಾರು 5.30ಕ್ಕೆ ದೇವಸ್ಥಾನದ ಗದ್ದುಗೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆದಿದೆ.

ಪ್ರತಿಷ್ಠೆಯ ಬಳಿಕ ಜೈನ್ ಸಮುದಾಯದ(Jain Community) ಅರ್ಚಕರು ಪ್ರಥಮ ಪೂಜೆ ನೆರವೇರಿಸಿದ ಬಳಿಕ ಚಾಲನೆ. ಎರಡು ದಿನಗಳ ಜಾತ್ರೆಯಲ್ಲಿ ಭಟ್ಕಳ(Bhatkal) ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ, ಸರ್ವಸೇವೆ, ಕುಂಕುಮಾರ್ಚನೆ ಮತ್ತು ಮಹಾ ಆರತಿಯಲ್ಲಿ ಭಾಗವಹಿಸಲಿದ್ದಾರೆ. ಮೊದಲ ದಿನ ಹೊರ ಊರಿನವರು ಹಬ್ಬ ಆಚರಿಸಿದರೇ, ಎರಡನೇ ದಿನ ಹತ್ತಿರದ ಗ್ರಾಮದ ನಾಗರಿಕರು ಆಚರಿಸುತ್ತಾರೆ‌

ಆಗಸ್ಟ್ 6ರಂದು ಸಂಜೆ 4.30ಕ್ಕೆ ಮಹಾ ಪ್ರಾರ್ಥನೆ ಹಾಗೂ ಬೃಹತ್ ವಿಸರ್ಜನಾ ಪೂಜೆ ನಡೆಯಲಿದೆ. ಬಳಿಕ ದೇವಸ್ಥಾನದಿಂದ ಮಿಸ್ಬಾ ಕ್ರಾಸ್, ಹಳೆ ಬಸ್ ನಿಲ್ದಾಣ, ಬಂದರು ರಸ್ತೆ, ಹನುಮಾನನಗರ ಹಾಗೂ ಜಾಲಿಕೋಡಿ ಮಾರ್ಗವಾಗಿ ಸುಮಾರು ಏಳು ಕಿ.ಮೀ ವರೆಗೆ ಭವ್ಯ ವಿಸರ್ಜನಾ ಮೆರವಣಿಗೆ ಸಾಗಲಿದೆ. ಕೊನೆಯಲ್ಲಿ ಸಮುದ್ರ ತೀರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜಲಸ್ತಂಭನಗೊಳಿಸಲಾಗುತ್ತದೆ.