ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಹೊನ್ನಾವರ(Honnavar) : ಗಣೇಶ ಚತುರ್ಥಿಯ ಪವಿತ್ರ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದುಬಂದಿದ್ದಾರೆ.

ಬೆಳಗಿನ ಜಾವದಿಂದಲೇ ದೇವಸ್ಥಾನದತ್ತ ಆಗಮಿಸುತ್ತಿರುವ ಭಕ್ತಾದಿಗಳು, ಸಾಲು ನಿಂತು ದ್ವಿಭುಜ ಬಾಲ ಗಣಪತಿಯ ದರ್ಶನ ಪಡೆದು ಧನ್ಯತೆ ಮೆರೆಯುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೆ, ನೆರೆ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.

ರೈತರಿಂದ ಕೃಷಿ ಕೊಡುಗೆ ಅರ್ಪಣೆ: ವಿಘ್ನವಿನಾಶಕನಿಗೆ ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆದ ಪ್ರಥಮ ಫಸಲಾದ ಹಣ್ಣು-ಹಂಪಲುಗಳು ಮತ್ತು ತರಕಾರಿಗಳನ್ನು ಅರ್ಪಿಸಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ. ಇಂದು ಸಹ ನೂರಾರು ರೈತರು ತರಕಾರಿ, ಹಣ್ಣುಗಳನ್ನು ತಂದು ಗಣೇಶನಿಗೆ ಅರ್ಪಿಸಿ ದೇವ ಅನುಗ್ರಹ ಪಡೆದರು.

3 ಕಿ.ಮೀ. ದಾಟಿದ ಸಾಲು : ಹಬ್ಬದ ಹಿನ್ನೆಲೆಯಲ್ಲಿ ಗಣಪತಿಯ ದರ್ಶನಕ್ಕಾಗಿ ಸುಮಾರು 3 ಕಿಲೋಮೀಟರ್ಗೂ ಹೆಚ್ಚು ಉದ್ದದ ಸರತಿ ಸಾಲು ಕಂಡುಬಂತು. ವಿಧಾನ ಸಭೆಯ ಉಪ ಸಭಾಪತಿ ಮಂಕಾಳ ವೈದ್ಯ ಅವರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ, ನಿಂತ ಭಂಗಿಯಲ್ಲಿರುವ ವಿಶೇಷ ಬಾಲ ಗಣಪತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಸುಗಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ: ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಮತ್ತು ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿವೆ. ಸಾಲಿನಲ್ಲಿ ನಿಂತ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು ಮತ್ತು ಕ್ಯೂ ಮ್ಯಾನೇಜ್ಮೆಂಟ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಮಾಡಲಾಗಿದೆ.
