ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ: ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿ ಹಾಗೂ ಮದರಸಾ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಭಟ್ಕಳದಲ್ಲಿ(Bhatkal) ವರದಿಯಾಗಿದೆ.
ಕಟ್ಟಡದ ಕಿಟಕಿ ಗಾಜುಗಳು ಜಖಂಗೊಂಡಿದ್ದು, ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಲಾಂದದಿಂದ ಹೊರಟಿದ್ದ ಗಣೇಶ ವಿಸರ್ಜನಾ ಮೆರವಣಿಗೆಯು ಗುಳ್ಮಿ ರೈಲ್ವೆ ಬ್ರಿಡ್ಜ್ ದಾಟಿ, ರೈಲ್ವೆ ಸ್ಟೇಷನ್ ರಸ್ತೆಯ ಮೂಲಕ ಸಾಗುತ್ತಿದ್ದಾಗ ಈ ಕೃತ್ಯ ನಡೆದಿದೆ. ರಸ್ತೆ ಪಕ್ಕದಲ್ಲಿರುವ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ (ಪ್ರಥಮ ಮಹಡಿ) ಹಾಗೂ ತಾಜುಸುನ್ನಾ ಅರೇಬಿಕ್ ಮದರಸಾ (ನೆಲಮಹಡಿ) ಮೇಲೆ ಅಪರಿಚಿತರು ಕಲ್ಲು ತೂರಿದ್ದಾರೆ. ಇದರಿಂದ ಕಿಟಕಿ ಗಾಜುಗಳು ಒಡೆದು ಹಾನಿಯಾಗಿದೆ ಎಂಬ ಆರೋಪಿಸಲಾಗಿದೆ.
ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕಿ, ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿ ಬಂದರ ರಸ್ತೆ 5ನೇ ಕ್ರಾಸ್ ನಿವಾಸಿ ಅಬ್ದುಲ್ ಅಲಿಂ (67) ಹಾಗೂ ಶಾಹುಲ್ ಅಮೀನ್ ಗವಾಯಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಠಾಣೆ ಎದುರು ಮುಸ್ಲಿಂ ಸಮುದಾಯದ ಪ್ರತಿಭಟನೆ: ಮಸೀದಿ ಮೇಲಿನ ದಾಳಿಯ ಸುದ್ದಿ ಹರಡುತ್ತಿದ್ದಂತೆ ಮುಸ್ಲಿಂ ಸಮುದಾಯದ ನೂರಾರು ಜನರು ಭಟ್ಕಳ (Bhatkal) ನಗರ ಪೊಲೀಸ್ ಠಾಣೆಯ ಎದುರು ಜಮಾಯಿಸಿದರು. ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣವೇ ಪತ್ತೆಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪೊಲೀಸ್ ತನಿಖೆ ಹಾಗೂ ಸ್ಥಳ ಪರಿಶೀಲನೆ: ಘಟನೆ ನಡೆದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೆಲ ಸದಸ್ಯರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಲಭ್ಯವಿರುವ ಇತರ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ.
ದೂರು ಆಧರಿಸಿ ಕೆಲವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ತನಿಖೆ ಮುಂದುವರಿದಿದೆ.