ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಬಹು ದಿನಗಳಿಂದ ಇಡುತ್ತಿರುವ ಆಟೋ ಚಾಲಕರು ಮತ್ತು ಮಾಲಕರ(Auto Drivers and Owners) ಪ್ರಮುಖ ಬೇಡಿಕೆಗಳನ್ನು ಇನ್ನೂ 15 ದಿನಗಳೊಳಗೆ ಈಡೇರಿಸದಿದ್ದರೇ ಜನಪ್ರತಿನಿಧಿಗಳ ವಿರುದ್ಧ ಕಪ್ಪು ಬಾವುಟ(Black Flag) ಪ್ರತಿಭಟನೆ ನಡೆಸುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ–ಮಾಲಕರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಸಿದೆ.
ಮಂಗಳವಾರ ಕಾರವಾರ ನಗರದ ಪತ್ರಿಕಾಭವನದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಟೋಗಳ ಪರ್ಮಿಟ್(Auto Permit) ವ್ಯಾಪ್ತಿಯನ್ನು ಕನಿಷ್ಠ 50 ಕಿ.ಮೀ.ಗೆ ವಿಸ್ತರಿಸಬೇಕು ಹಾಗೂ ಹೊಸ ಪರ್ಮಿಟ್‌ಗಳನ್ನು ಐದು ವರ್ಷ ಸ್ಥಗಿತಗೊಳಿಸಬೇಕು ಎಂದರು.
ಫೆಬ್ರುವರಿ 12ರಂದು ಆರ್‌ಟಿಓ(RTO) ಅವರ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಜುಲೈ 7ರಂದು ಸಿಎನ್‌ಜಿ(CNG) ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ. ಉತ್ತರಕನ್ನಡ(Uttarkannada) ಜಿಲ್ಲೆಯಲ್ಲಿ ಏಳು ಸಾವಿರಕ್ಕೂ ಅಧಿಕ ಆಟೋಗಳಿದ್ದು, ಹೆಚ್ಚುತ್ತಿರುವ ಸಂಖ್ಯೆಯಿಂದ ನಿಲ್ದಾಣದ ಕೊರತೆ ಹಾಗೂ ಚಾಲಕರ ಆದಾಯ ಕುಸಿತ ಉಂಟಾಗಿದೆ. ಎರಡಕ್ಕಿಂತ ಹೆಚ್ಚು ಪರ್ಮಿಟ್ ಹೊಂದಿರುವವರ ವಿರುದ್ಧ ಕ್ರಮ, ಹೊರಜಿಲ್ಲೆಯ ಆಟೋಗಳಿಗೆ ಪರ್ಮಿಟ್ ನೀಡುವುದಕ್ಕೆ ನಿಯಂತ್ರಣ ಮಾಡುವಂತೆ ಒತ್ತಾಯಿಸಿದರು. ಮುರ್ಡೇಶ್ವರದಲ್ಲಿ(Murdeshwar) 300ಕ್ಕೂ ಹೆಚ್ಚು ಆಟೋಗಳಿದ್ದರೂ 3 ಕಿ.ಮೀ. ವ್ಯಾಪ್ತಿಗೆ ಸೀಮಿತವಾಗಿರುವುದರಿಂದ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಶಿರಸಿ(Sirsi) ಹಾಗೂ ಮುಂಡಗೋಡ(Mundgod) ತಾಲೂಕಿನ ಕೆಲವು ಪಂಪ್‌ಗಳಲ್ಲಿ ಸಿಎನ್‌ಜಿ ಬದಲಿಗೆ ಸಿಬಿಜಿ ಪೂರೈಕೆ ಮಾಡಲಾಗುತ್ತಿದೆ. ಆದರೆ ಸಿಎನ್‌ಜಿ ದರ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇನ್ಸುರೆನ್ಸ್ ಪ್ರೀಮಿಯಂ ಕಡಿತಗೊಳಿಸಬೇಕು. ಶುದ್ಧ ಸಿಎನ್‌ಜಿ ಪೂರೈಕೆಯ ಲಿಖಿತ ಭರವಸೆ ದೊರೆಯುವವರೆಗೆ ಹೊಸ ಸಿಎನ್‌ಜಿ ವಾಹನಗಳ ಪಾಸಿಂಗ್, ನೋಂದಣಿ ಹಾಗೂ ಪರ್ಮಿಟ್ ಪ್ರಕ್ರಿಯೆ ಮೇಲಿನ ತಡೆ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಓಲಾ, ಉಬರ್, ರ್ಯಾಪಿಡೋ ಹಾಗೂ ಬಾಡಿಗೆ ಬೈಕ್‌ಗಳಿಗೆ ಹೊಸ ಪರವಾನಿಗೆ ನೀಡಬಾರದು. ಚಾಲಕರ ಕುಟುಂಬಗಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ, ವಿಶೇಷ ಆರೋಗ್ಯ ಕಾರ್ಡ್, 60 ವರ್ಷ ಬಳಿಕ 5 ಸಾವಿರ ರೂ. ಪಿಂಚಣಿ ಹಾಗೂ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪ್ರತ್ಯೇಕ ಚಾಲಕರ ಕಲ್ಯಾಣ ಮಂಡಳಿ, ಆಟೋ ನಿಲ್ದಾಣಗಳ ಅಧಿಕೃತ ನೋಂದಣಿ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕುಂದುಕೊರತೆ ಸಮಿತಿ ರಚಿಸುವಂತೆಯೂ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸದಿದ್ದರೆ ಬೃಹತ್ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ವಿಶ್ವನಾಥ ಗೌಡ ಎಚ್ಚರಿಸಿದರು.
ಗ್ರಾಹಕರ ನ್ಯಾಯಾಲಯದಲ್ಲಿ ಕೇಸು : ಕಳೆದ ಕೆಲ ತಿಂಗಳಿಂದ ಶಿರಸಿ ಹಾಗು ಮುಂಡಗೋಡಿನಲ್ಲಿ ಸಿಎನ್ಜಿ ಆಟೋಗಳಿಗೆ ಸಿಎನ್ಜಿ ಬದಲು ಸಿಬಿಜಿ ಪೂರೈಸಲಾಗುತ್ತಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಹಕರ ನ್ಯಾಯಾಲಯದಲ್ಲಿ(Consumer Court) 35 ಆಟೋ ಚಾಲಕರು ಕೇಸು ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿಎನ್ಜಿ ಹೊಂದಿದ ಎಲ್ಲಾ ಆಟೋ ಚಾಲಕರು ಕೇಸು ದಾಖಲಿಸಲಿದ್ದೇವೆಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಆಟೋ ಚಾಲಕ ಸಂಘದ ಉಪಾಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಭಟ್ಕಳದಲ್ಲಿ ಒಂದೇ ಸಿಎನ್ಜಿ ಬಂಕ್(CNG Bunk) ಇದೆ. ಉಳಿದ ಕಡೆಗಳಲ್ಲಿ ಬಂಕ್ ನಿರ್ಮಿಸಲು ಅವಕಾಶ ಕೊಡುತ್ತಿಲ್ಲ. ಆಟೋ ಪರ್ಮಿಟ್ ವಿಸ್ತರಿಸಿ ಕೊಡಬೇಕೆಂಬುದು ಆಗ್ರಹಿಸಲಾಗಿದೆ. ಕೇವಲ ಏಳು ಕಿಮಿ ಮಾತ್ರ ಇರುವ ಅಂತರವನ್ನ ವಿಸ್ತರಿಸಬೇಕೆಂದು ಆಗ್ರಹಿಸಿದ್ರು. ಆಟೋಗಳ ಇನ್ಶುರೆನ್ಸ್ ಹಣವನ್ನ ಹತ್ತು ಸಾವಿರ ತೆಗೆದುಕೊಳ್ತಾರೆ. ಆದ್ರೆ ಟ್ಯಾಕ್ಸಿಯವರಿಗೆ ಮೂರ್ನಾಲ್ಕು ಸಾವಿರ ಮಾತ್ರ ಇದ್ದು ಇದು ಅನ್ಯಾಐವಾಗಿದೆ ಎಂದು ಹೇಳಿದ ಅವರು, ಭಟ್ಕಳ ಸರ್ಕಲ್ ನಿಂದ ರಂಗಿಕಟ್ಟೆವರೆಗೆ(Bhatkal Circle to Ranginakatte) ಒಂದೇ ಒಂದು ಡಿವೈಡರ್ ಇಲ್ಲ ಹೀಗಾಗಿ ಒಂದುವರೆ ಕಿಮಿ ಕ್ರಮಿಸಿ ಸುತ್ತುವರಿದು ಬರಬೇಕಾಗುತ್ತದೆ. ಹೀಗಾಗಿ ಆಟೋ ಚಾಲಕರು ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಬೇಕೆಂದು ಅವರು ತಿಳಿಸಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಮಾತನಾಡಿ, ಈ ಹಿಂದೆ ಕಾರವಾರದಲ್ಲಿ ರೆಂಟಲ್ ಬೈಕ್ ಗೆ ಅವಕಾಶ ನೀಡಬಾರದೆಂದು ತಿಳಿಸಿದ್ದೇವು. ಆಟೋ ಚಾಲಕರ ಮಕ್ಕಳಿಗೆ ಸರ್ಕಾರಿ ಹಾಗೂ ಖಾಸಗಿಯಾಗಿ ಉಚಿತ ಆರೋಗ್ಯ ಸೇವೆ(Fre Health Service) ದೊರಕಿಸಿಕೊಡಬೇಕು. ಹೆಲ್ತ್ ಕಾರ್ಡ್(Health Card) ದೊರಕಿಸಿಕೊಡಬೇಕು. ಪಿಂಚಣಿ ಸೌಲಭ್ಯ ಕೊಡಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಆರ್.ಜಿ. ನಾಯ್ಕ, ಉಪಾಧ್ಯಕ್ಷ ವೆಂಕಟೇಶ ನಾಯ್ಕ, ಶ್ರೀನಿವಾಸ ನಾಯ್ಕ ಭಟ್ಕಳ, ಶ್ರೀಧರ ನಾಯ್ಕ ಮುರ್ಡೇಶ್ವರ, ಚಂದ್ರಹಾಸ ನಾಯ್ಕ, ಮಹೇಶ ನಾಯ್ಕ, ಸಲಿಂ ಅಹಮದ್ ಯುಸೂಪ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.