ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕೊಪ್ಪಳ(Koppal): ಜಿಲ್ಲೆಯಲ್ಲಿ ಬಸ್ ಅಭಾವದ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಶಿಕ್ಷಣ ಪಡೆಯಲು ಕಷ್ಟಪಡುವ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ಆಡಳಿತ ಮಂಡಳಿ ಹಾಗೂ ಸಾರಿಗೆ ಇಲಾಖೆಯ (Transport Department) ನಿರ್ಲಕ್ಷ್ಯಕ್ಕೆ ಸಾರ್ವಜನಿಕರು(Public) ಹಾಗೂ ವಿದ್ಯಾರ್ಥಿ(Student) ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಬಸ್ ತಡೆದು ಆಕ್ರೋಶ ಹೊರಹಾಕಿದ ವಿದ್ಯಾರ್ಥಿನಿ : ಕೊಪ್ಪಳ(Koppal) ತಾಲೂಕಿನ ಹೊಸಹಳ್ಳಿಯಲ್ಲಿ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬಂದಿದೆ. ಹ್ಯಾಟಿಯಿಂದ ಕೊಪ್ಪಳಕ್ಕೆ (Haty to Koppal) ತೆರಳುತ್ತಿದ್ದ ಸಾರಿಗೆ ಬಸ್, ವಿದ್ಯಾರ್ಥಿಗಳು ಬಸ್ ಸ್ಟ್ಯಾಂಡ್‌ನಲ್ಲಿ ಕಾಯುತ್ತಿದ್ದರೂ ಬಸ್ ನಿಲ್ಲಿಸದೆ ಹಾಗೆಯೇ ತೆರಳಲು ಯತ್ನಿಸಿದೆ.
ಇಂದು ಪ್ರಮುಖ ಪರೀಕ್ಷೆ ಇದ್ದರೂ ಬಸ್ ಚಾಲಕ ಬಸ್ ನಿಲ್ಲಿಸದಿದ್ದಕ್ಕೆ ರೊಚ್ಚಿಗೆದ್ದ ವಿದ್ಯಾರ್ಥಿನಿಯೊಬ್ಬಳು, ರಸ್ತೆಯಲ್ಲೇ ಬಸ್ ತಡೆದು ಚಾಲಕ ಮತ್ತು ನಿರ್ವಾಹಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾಳೆ. “ನಮಗೆ ಇವತ್ತು ಪರೀಕ್ಷೆ ಇದೆ, ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ನಮ್ಮ ಭವಿಷ್ಯ ಏನು?” ಎಂದು ತರಾಟೆಗೆ ತೆಗೆದುಕೊಂಡಿದ್ದಾಳೆ.
ಬಸ್ ಫುಟ್‌ಬೋರ್ಡ್ ಮೇಲೆಯೇ ಯಮನ ಜೊತೆ ಆಟ! : ಕೊಪ್ಪಳ ಜಿಲ್ಲೆಯ ವೆಂಕಟಗಿರಿ ಗ್ರಾಮದಲ್ಲಿ (Venkatagiri Village) ಎದೆನಡುಗಿಸುವ ಘಟನೆಯೊಂದು ವರದಿಯಾಗಿದೆ. ಸರಿಯಾದ ಸಮಯಕ್ಕೆ ಸೂಕ್ತ ಬಸ್ ಸೌಕರ್ಯವಿಲ್ಲದ ಕಾರಣ, ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಬಸ್‌ನ ಫುಟ್‌ಬೋರ್ಡ್ (ಫುಟ್ ರೆಸ್ಟ್) ಮೇಲೆ ನೇತಾಡುತ್ತಾ ಪ್ರಯಾಣಿಸುತ್ತಿದ್ದಾರೆ.
ಸ್ವಲ್ಪ ಕೈ ತಪ್ಪಿದರೂ ಅಥವಾ ಚಾಲಕ ಬ್ರೇಕ್ ಹಾಕಿದರೂ ಪ್ರಾಣಕ್ಕೇ ಕಂಟಕ ಎದುರಾಗುವ ಸನ್ನಿವೇಶ ಇಲ್ಲಿದೆ. “ನಮ್ಮ ಜೀವಕ್ಕೆ ಬೆಲೆಯೇ ಇಲ್ಲವೇ?” ಎಂದು ವಿದ್ಯಾರ್ಥಿಗಳು ಕಣ್ಣೀರಿಡುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ.
ಸಾರ್ವಜನಿಕರ ಆಗ್ರಹ: ಜಿಲ್ಲಾದ್ಯಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಬೇಕು. ಶಾಲಾ-ಕಾಲೇಜು ಸಮಯದಲ್ಲಿ ನಿಗದಿಗಿಂತ ಹೆಚ್ಚು ಬಸ್‌ಗಳನ್ನು ಓಡಿಸಬೇಕು ಮತ್ತು ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುವ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತದೆಯೇ? ಕಾಯ್ದು ನೋಡಬೇಕಿದೆ.