ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news)ಕಾರವಾರ(Karwar): ಮಕ್ಕಳ ಜಗಳದ ಬಗ್ಗೆ ಪೋಷಕರಿಗೆ ತಿಳಿಸಿ ಬುದ್ಧಿವಾದ ಹೇಳಲು ಹೋದವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನ ಚಿತ್ತಾಕುಲ ಪೊಲೀಸರು(Chittakul Police) ಬಂಧಿಸಿದ್ದಾರೆ.

ಅಸ್ನೋಟಿ ಭಗವತವಾಡದ ದೀಪಕ ಬಾಳಾ ನಾಯ್ಕ (41) ಬಂಧಿತ ವ್ಯಕ್ತಿಯಾಗಿದ್ದಾನೆ. ಸೆ.26ರಂದು ಸಂಜೆ 5.45ರ ಸುಮಾರಿಗೆ ರೋಷನ್ ದೀಪಕ ನಾಯ್ಕ, ಸಿದ್ದಾರ್ಥ ಸತೀಶ ಗೋಸಾವಿ ಹಾಗೂ ಇತರರು ಬಾಲಕನ ಮನೆಗೆ ತೆರಳಿದ್ದರು. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಬಾಲಕ ಚೇಷ್ಟೆ ಮಾಡಿದ್ದಲ್ಲದೆ, ಸಿದ್ದಾರ್ಥ ಗೋಸಾವಿ ಅವರ ಸ್ನೇಹಿತ ಸಾಯಿಸನಾಥ್ ಎಂಬಾತನೊಂದಿಗೆ ಜಗಳ ಮಾಡಿಕೊಂಡಿದ್ದ ಬಗ್ಗೆ ಪೋಷಕರಿಗೆ ತಿಳಿಸಿ ಬುದ್ಧಿವಾದ ಹೇಳುವುದು ಅವರ ಉದ್ದೇಶವಾಗಿತ್ತು.

ಈ ವೇಳೆ ಬಾಲಕನ ತಂದೆ ದೀಪಕ ಬಾಳಾ ನಾಯ್ಕ ಹಾಗೂ ಬಾಲಕ ಸೇರಿ ರೋಷನ್ ದೀಪಕ ನಾಯ್ಕ ಮತ್ತು ಸಿದ್ದಾರ್ಥ ಸತೀಶ ಗೋಸಾವಿ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಸ್ಥಳೀಯ ಮಾಹಿತಿಯ ಆಧಾರದಲ್ಲಿ ದೀಪಕ ಬಾಳಾ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೂ ಭಾಗಿಯಾಗಿರುವುದರಿಂದ, ಆತನನ್ನು ಕಾನೂನು ಪ್ರಕಾರ ಬಾಲ ನ್ಯಾಯ ಮಂಡಳಿ (ಜೆ.ಜೆ. ಬೋರ್ಡ್) ಮುಂದೆ ಹಾಜರುಪಡಿಸಲಾಗಿದೆ.