ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಗೋಕರ್ಣ(Gokarn): ಇಲ್ಲಿನ ದುಬ್ಬನಶಶಿ ಕಡಲತೀರದಲ್ಲಿ ಈಜಲು ಹೋಗಿ ಸಮುದ್ರದ ಪಾಲಾಗಿದ್ದ ಬೆಂಗಳೂರಿನ(Banglore) ಖಾಸಗಿ ಕಂಪನಿಯ ಉದ್ಯೋಗಿಗಳಲ್ಲಿ, ನಾಪತ್ತೆಯಾಗಿದ್ದ ಕೊನೆಯ ಯುವಕನ ಮೃತದೇಹವೂ ಸೋಮವಾರ ಪತ್ತೆಯಾಗಿದೆ. ಇದರೊಂದಿಗೆ ಈ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಉತ್ತರ ಕನ್ನಡ(Uttarkannada) ಜಿಲ್ಲೆಯ ಕುಮಟಾ (Kumta) ತಾಲೂಕಿನ ಗೋಕರ್ಣದ ದುಬ್ಬನಶಶಿ ಬೀಚ್ನಲ್ಲಿ ಈ ದುರಂತ ಸಂಭವಿಸಿತ್ತು.
ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ‘ಅಲೋರಿಯಾ ಇಕೋಸ್ಪೇಸ್’ ಕಂಪನಿಯ 16 ಜನರ ನೌಕರರ ತಂಡವೊಂದು ಶನಿವಾರ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿತ್ತು. ಸಮುದ್ರದಲ್ಲಿ ಈಜಾಡುತ್ತಿದ್ದಾಗ ಏಕಾಏಕಿ ಎದ್ದ ಬೃಹತ್ ಅಲೆಗೆ ಸಿಲುಕಿ ಐವರು ಉದ್ಯೋಗಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಮೀನುಗಾರರು ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಶೋಭಾದಾಸ್ (22), ಮಹಮ್ಮದ್ ಅಕ್ರಮ್ ಹಾಗೂ ವಿಶ್ವೇಶ್ (24) ಎಂದು ಗುರುತಿಸಲಾಗಿದೆ.
ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದ ಬೆಂಗಳೂರಿನ ಬಾಬುಸಾಪಾಳ್ಯದ ವಿಶ್ವೇಶ್ (24) ಅವರ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗಿದ್ದು, ಇದೀಗ ಅವರ ಶವವೂ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗೋಕರ್ಣ(Gokarn) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.