ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar ) : ಧ್ವಜಾರೋಹಣಕ್ಕೆ ಬಳಸುವ ದಾರವನ್ನೆ ಬಳಸಿಕೊಂಡು ವ್ಯಕ್ತಿಯೋರ್ವ ಶಾಲಾ ಆವರಣದಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕೋಡಿಭಾಗದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ನಡೆದಿದೆ.

ಕೋಡಿಭಾಗ ನಿವಾಸಿ ಸತೀಶ್ ಶ್ರೀಧರ ನಂಬಿಯಾರ (43) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೂರು ದಿನಗಳಿಂದ ಸತೀಶ್ ಅವರ ವರ್ತನೆ ಬದಲಾಗಿತ್ತು. ಯಾವುದೋ ವಿಚಾರಕ್ಕೆ ಆತ ಮನನೊಂದಂತೆ ಕಂಡುಬಂದಿದ್ದರು ಎನ್ನಲಾಗಿದೆ. ಕಳೆದ
23 ವರ್ಷಗಳಿಂದ ಮಕ್ಕಳಾಗದ ಕೊರಗು ಸತೀಶ್ ಅವರನ್ನು ಕಾಡುತ್ತಿತ್ತು ಎನ್ನಲಾಗಿದ್ದು, ಇದರ ಜತೆಗೆ ಸಾಲದ ಸಮಸ್ಯೆ ಇರುವ ಕಾರಣಕ್ಕೆ ಅವರು ಮಾನಸಿಕವಾಗಿ ನೊಂದಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಶಾಲಾ ಆವರಣದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪ್ರತಿದಿನ ವಿದ್ಯಾರ್ಥಿಗಳ ಓಡಾಟದಿಂದ ತುಂಬಿರುತ್ತಿದ್ದ ಆವರಣದಲ್ಲಿ ನಡೆದ ಘಟನೆ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಆಘಾತಕ್ಕೊಳಪಡಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಕಾರವಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆಗೆ ಕಾರಣವಾದ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.