ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಮುಂಡಗೋಡು(Mundgod) : ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ(KSRTC Busstand) ಎದುರಿನ ಅಂಬಿಕಾ ಸಾವಜಿ ಹೊಟೇಲ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು(Uttarakannada District Police) ಕೇವಲ 24 ಗಂಟೆಯೊಳಗೆ ಭೇದಿಸಿ, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏಪ್ರಿಲ್ 24 ರಂದು ರಾತ್ರಿ 11.00 ರಿಂದ 11.15ರ ಅವಧಿಯಲ್ಲಿ, ನೂರಾನಿಗಲ್ಲಿ ನಿವಾಸಿ ಜಮೀರ್ ಅಹ್ಮದ್ ದರ್ಗಾವಾಲೆ (38) ಮೇಲೆ ನಾಲ್ವರು ದುಷ್ಕರ್ಮಿಗಳು ದ್ವೇಷದ ಹಿನ್ನಲೆಯಲ್ಲಿ ಖಾರದ ಪುಡಿ ಎರಚಿ, ಬಳಿಕ ಹರಿತವಾದ ಆಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ(Mundgod Police Station) ಪ್ರಕರಣ ದಾಖಲಾಗಿತ್ತು.
ಪ್ರಕರಣದ ತೀವ್ರತೆಯನ್ನು ಮನಗಂಡು ಮೇಲಾಧಿಕಾರಿಗಳ ಸೂಚನೆಯಂತೆ ಮೂರು ವಿಶೇಷ ತಂಡವನ್ನು(Special Team) ರಚಿಸಿ, ಸ್ಥಳೀಯ ಗುಪ್ತಚರ ಮಾಹಿತಿ ಹಾಗೂ ತಾಂತ್ರಿಕ ವಿಶ್ಲೇಷಣೆಯ ನೆರವಿನಿಂದ ತನಿಖೆ ಚುರುಕುಗೊಳಿಸಲಾಯಿತು. ಪರಿಣಾಮವಾಗಿ, ಪ್ರಕರಣ ನಡೆದ 24 ಗಂಟೆಗಳೊಳಗೆ ಆರೋಪಿತರಾದ ಮಂಜುನಾಥ ಕಾಜಗಾರ, ಶ್ರೀಕಾಂತ ಕಿರಣ್ಣನವರ, ಮಂಜುನಾಥ ಬೆಳಗಾಂವ, ಅಭಿಷೇಕ ಬಡಶೆಟ್ಟಿ ಹಾಗೂ ದೀಪಕ್ ನವಲೆ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala) ಸಮೀಪ ಬಂಧಿಸಲಾಯಿತು.
ಬಂಧಿತರ ಬಳಿಯಿಂದ ಕೃತ್ಯಕ್ಕೆ ಬಳಸಿದ ಎರಡು ಬೈಕ್‌ಗಳು, ಒಂದು ಕಾರು, ಎರಡು ದೇಶೀ ಪಿಸ್ತೂಲ್ ಹಾಗೂ ಆರು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಶಿರಸಿ ಉಪವಿಭಾಗದ ಡಿಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿತ್ತು. ಮುಂಡಗೋಡ, ಗೋಕರ್ಣ, ಯಲ್ಲಾಪುರ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನು ಓದಿ : ಹೊಟೇಲ್‌ಗೆ ನುಗ್ಗಿ ರೌಡಿಶೀಟರ್ ಭೀಕರ ಹತ್ಯೆ. ಅಂತೂ ಮುಗಿಸಿಯೇ ಬಿಟ್ರು ಕಿರಾತಕರು.
