ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು, ಅಂಗನವಾಡಿ ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ಜುಲೈ 26 ರಂದು ರಜೆ ಘೋಷಿಸಲಾಗಿದೆ.

ಬೆಂಗಳೂರಿನ ಭಾರತೀಯ ಹವಮಾನ ಇಲಾಖೆ ತಿಳಿಸಿದಂತೆ. ಜುಲೈ  26ರವರೆಗೆ  ಭಾರಿ ಮಳೆಯಾಗುವ ಸೂಚನೆ ಹಿನ್ನಲೆಯಲ್ಲಿ ಆರೇಂಜ್ ಅಲರ್ಟ್ ನೀಡಿದೆ. ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಹಶೀಲ್ದಾರರು ಹಳ್ಳಕೊಳ್ಳಗಳು ಭಾರಿ ಮಳೆಯಿಂದ ತುಂಬಿದ್ದು ಶಾಲಾ ಮಕ್ಕಳಿಗೆ ಶಾಲೆಗೆ ತೆರಳಲು ಅನಾನುಕೂಲವಾಗುವುದರ ಜೊತೆಗೆ ಅವಘಡಗಳು ಸಂಭವಿಸುವ ಸಾಧ್ಯತೆಯ ಬಗ್ಗೆ ತಿಳಿಸಿದ್ದಾರೆ.

ಹೀಗಾಗಿ ಶಾಲಾ ಮಕ್ಕಳ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34(ಎಮ್) ರಡಿ  ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೋಯಿಡಾ, ಹಳಿಯಾಳ ಹಾಗೂ ಯಲ್ಲಾಪುರ ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಪದವಿ ಪೂರ್ವ ಕಾಲೇಜುಗಳಿಗೆ, ಐ.ಟಿ.ಐ ಹಾಗೂ ಡಿಪ್ಲೋಮಾ ಕಾಲೇಜುಗಳಿಗೆ ಜುಲೈ 26 ರಂದು ರಜೆ ಘೋಷಿಸಲಾಗಿದೆ. ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.