ಭಟ್ಕಳ(BHATKAL) : ಅದೇಕೋ ಏನೋ ಗೊತ್ತಿದ್ದರೂ ಕೂಡ ತಮಗೆ ಸಂಬಂಧವೇ ಇಲ್ಲಾ ಎನ್ನುವಂತಿದೆ ಅಧಿಕಾರಿಗಳ ನಡೆ. ಕಾರವಾರದ ಕಾಳಿ ಸೇತುವೆ(KALI BRIDGE) ಯ ಬಗ್ಗೆ ಗೊತ್ತಿದ್ದರೂ ಕೂಡ ನಿರ್ಲಕ್ಷ ಮಾಡಿದರಿಂದ ವಾಹನಗಳ ಸಂಚಾರ ಮುಂದುವರಿದಿತ್ತು. ಅದೃಷ್ಟ ಸರಿಯಿದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಉತ್ತರಕನ್ನಡ(UTTARKANNADA) ಜಿಲ್ಲೆಯ ಅದೆಷ್ಟೋ ಕಡೆಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುವ ಸನ್ನಿವೇಶಗಳು ಕಾಣಿಸುತ್ತಿವೆ. ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಇಂಥದೊಂದು ಉದಾಹರಣೆ ಸಿಕ್ಕಿದೆ ನೋಡಿ. ಮುಂಡಳ್ಳಿಯಿಂದ ಮೊಗೇರಕೇರಿಗೆ ತೆರಳುವ ರಸ್ತೆ ಬದಿಯಲ್ಲಿ ಬಿರುಕು ಬಿಟ್ಟಿದೆ. ಮುಂಡಳ್ಳಿಯ ಹೊಳೆಯಲ್ಲಿ ನಿರ್ಮಿಸಿರುವ ಸೇತುವೆ ಪಕ್ಕದಲ್ಲಿ ಈ ರೀತಿ ಬಿರುಕು ಬಿಟ್ಟಿರುವುದು ನಾಗರಿಕರ ಆತಂಕವನ್ನ ಹೆಚ್ಚು ಮಾಡಿದೆ.
ವಿವಿಧ ಯೋಜನೆಗಳಿಗೋಸ್ಕರ ಆಗಾಗ ರಸ್ತೆ ಬದಿಯಲ್ಲಿ ಟ್ರೆಂಚ್ ತೆಗೆದು ಪೈಪ್ ಹಾಕಲಾಗಿದೆ. ಜೆಜೆಎಂ(JJM SCHEME) ಯೋಜನೆಯಡಿಯಲ್ಲಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ಈ ರೀತಿ ಕಾಂಕ್ರಿಟ್ ರಸ್ತೆ ಅಂಚಿನಲ್ಲಿ ಬಿರುಕು ಬಿಟ್ಟಿರುವುದು ಗೊತ್ತಾಗಿದೆ. ಒಂದು ವೇಳೆ ಮಳೆ ಜಾಸ್ತಿಯಾದರೆ ಹೊಂಡ ಜಾಸ್ತಿಯಾಗಿ ಕಾಂಕ್ರಿಟ್ ರಸ್ತೆ ಕುಸಿದು ಹೋದರೂ ಅಚ್ಚರಿಯಿಲ್ಲ. ಹೀಗಾಗಿ ಸಂಬಂಧಪಟ್ಟವರು ಕಣ್ಣೆತ್ತಿ ನೋಡಬೇಕಾಗಿದೆ. ಇಲ್ಲದಿದ್ದಲ್ಲಿ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ನಾಗರಿಕರು ಹೇಳಿದ್ದಾರೆ.
ಕೇವಲ ಇದೊಂದು ರಸ್ತೆಯಲ್ಲ. ಜಿಲ್ಲೆಯ ವಿವಿಧಡೆಗಳಲ್ಲಿ ಅಪಾಯ ಸೂಚಿಸುವ ಅನೇಕ ಕಡೆ ರಸ್ತೆಗಳು, ಸೇತುವೆಗಳಿವೆ. ಅವುಗಳ ಬಗ್ಗೆ ಕೊಂಚ ಲಕ್ಷ್ಯ ವಹಿಸುವ ಕೆಲಸವನ್ನ ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲೆಯ ನಾಗರಿಕರು ಆಗ್ರಹಿಸಿದ್ದಾರೆ.