ಕಾರವಾರ(KARWAR): ಹಳೆಯ ಕಾಳಿ ಸೇತುವೆ(KALI BRIDGE) ಮಧ್ಯರಾತ್ರಿ ಕುಸಿದಿದ್ದು ಹೊಸ ಸೇತುವೆಯ ಮೇಲೆ ದ್ವಿ ಮಾರ್ಗದ ಸಂಚಾರ ಆರಂಭವಾಗಿದೆ. ಆದರೆ ರಾತ್ರಿಯ ವೇಳೆಯಲ್ಲಿ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ವಿದ್ಯುತ್ ವ್ಯವಸ್ಥೆ ಇಲ್ಲದೆ ತೊಂದರೆಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ತುರ್ತಾಗಿ ವಿದ್ಯುತ್ ಕಂಬ ಅಳವಡಿಸಲು ಐ ಆರ್ ಬಿ(IRB) ಕಂಪನಿಗೆ ಸೂಚಿಸಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್ ಆಗ್ರಹಿಸಿದ್ದಾರೆ.

ಹಳೆಯ ಸೇತುವೆ ಮೇಲೆ ಸಾಮಾನ್ಯ ಬೆಳಕಿನ ವಿದ್ಯುತ್ ಕಂಬಗಳಿದ್ದು ರಾತ್ರಿಯ ವೇಳೆ ಸಂಚರಿಸಲು ಅನುಕೂಲವಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ(NH66 ) ಹೊಸ ಸೇತುವೆ ನಿರ್ಮಾಣವಾಗಿ ವರ್ಷಗಳೇ ಕಳೆದರೂ ವಿದ್ಯುತ್ ಕಂಬ ಅಳವಡಿಸದೆ ಇರುವುದು ಕಾಮಗಾರಿ ನಡೆಸಿದ ಕಂಪನಿಯ ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಈಗ ಸೇತುವೆ ಮುರಿದ ಪರಿಣಾಮ ದ್ವಿ ಮಾರ್ಗದ ವಾಹನಗಳು ಒಂದೇ ಸೇತುವೆಯ ಮೇಲೆ ಸಂಚರಿಸಬೇಕಾಗಿದೆ. ರಾತ್ರಿಯ ವೇಳೆ ಅಪಾಯದ ಸಾಧ್ಯತೆಗಳು ಹೆಚ್ಚಿವೆ. ಮಳೆಗಾಲವಾಗಿರುವುದರಿಂದ ವಿಪರೀತ ಗಾಳಿ ಮಳೆಯಲ್ಲಿ ಬೈಕ್ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾದಚಾರಿಗಳಿಗೂ ಸರಿಯಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಜಿಲ್ಲಾಧಿಕಾರಿಗಳು ಆದಷ್ಟು ಬೇಗ ವಿದ್ಯುತ್ ಕಂಬ ಅಳವಡಿಸಿ  ಬೆಳಕಿನ ವ್ಯವಸ್ಥೆ ಮಾಡಿಸುವಂತೆ ಜಯ ಕರ್ನಾಟಕ ಜನಪರ ಸಂಘಟನೆ ಒತ್ತಾಯಿಸಿದೆ.

ತಕ್ಷಣವೇ ಸೇತುವೆ ಮೇಲೆ ಬೆಳಕಿನ ವ್ಯವಸ್ಧೆ ಆಗಲಿ ಎಂದು ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್, ಜಿಲ್ಲಾ ಕಾರ್ಯಾಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಉಪಾಧ್ಯಕ್ಷ ಪ್ರದೀಪ ಶೆಟ್ಟಿ ಮತ್ತು ರಫೀಕ್ ಹುದ್ದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೇಶ್ ನಾಯ್ಕ, ಜಿಲ್ಲಾ ಸಂಚಾಲಕ ಸುನೀಲ್ ತಾಂಡೆಲ್, ಕಾರವಾರ ತಾಲ್ಲೂಕು ಅಧ್ಯಕ್ಷ ಮೋಹನ ಉಳ್ವೇಕರ್ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಆಗ್ರಹಿಸಿದ್ದಾರೆ.