ಹಾವೇರಿ(HAVERI) : ಗೃಹಲಕ್ಷ್ಮೀ ಯೋಜನೆಯಿಂದ (GRUHALAXMI SCHEME) ಅತ್ತೆ ಸೊಸೆಯರ ನಡುವೆ ಜಗಳ ಗ್ಯಾರಂಟಿ(GUARANTEE) ಎನ್ನಲಾಗುತಿತ್ತು. ಆದರೆ ಈ ಯೋಜನೆ ಅತ್ತೆ ಸೊಸೆಯರ ಸಂಬಂಧ ಗಟ್ಟಿ ಮಾಡಿದ ಸಂಗತಿ ಇಲ್ಲೊಂದಿದೆ.

ತಾಲೂಕಿನ ನೀರಲಗಿ (ಎನ್.ಎಂ.ತಡಸ್) ಗ್ರಾಮದಲ್ಲಿ ಅತ್ತೆಯೊಬ್ಬರು ಈಗ ಸೊಸೆಗಾಗಿ ಫ್ಯಾನ್ಸಿ ಸ್ಟೋ‌ರ್ ಮಾಡಿಕೊಟ್ಟು ಎಲ್ಲಾ ಮನೆಯ ಸೊಸೆಯಂದಿರು ತಲೆ ಕೆರೆದುಕೊಳ್ಳುವಂತೆ ಮಾಡಿದ್ದಾರೆ.

ದಾಕ್ಷಾಯಿಣಿ ಸಿದ್ಧನಗೌಡ ಪಾಟೀಲ ಎಂಬುವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ (CONGRESS GOVERNMENT) ಘೋಷಿಸಿದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆಯಡಿ ಬರುವ ಹಣವನ್ನು ಕೂಡಿಸಿ ಸೊಸೆಗೆ ಗಿಫ್ಟ್ ನೀಡಿದ್ದಾರೆ. ಒಟ್ಟು 10 ತಿಂಗಳ ಹಣ ಕೂಡಿಟ್ಟು ತನ್ನ ಸೊಸೆ ಕುಮಾರಿ ಶಿವನಗೌಡ ಪಾಟೀಲ ಎಂಬಾಕೆ ಹೊಲದ ಕೆಲಸಕ್ಕೆ ಹೋಗಬಾರದು ಎಂದು 20 ಸಾವಿರ  ರೂ. ಬಳಸಿ ಫ್ಯಾನ್ಸಿ ಸ್ಟೋರ್ ಮಾಡಿದ್ದಾರೆ.

ಶ್ರಾವಣ ಮಾಸದ ಶುಭ ದಿನದಂದು  ಫ್ಯಾನ್ಸಿ ಸ್ಟೋರ್‌ ಗೆ ಪೂಜೆ ಮಾಡಿ ಉದ್ಘಾಟಿಸಿದ್ದಾರೆ.  ಸೊಸೆ ತನ್ನ ಮಗಳಿದ್ದಂಗೆ, ಅವಳು ಹೊರಗೆ ದುಡಿಯೋಕೆ ಹೋಗೋದು ಬೇಡ ಅಂತ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾಗಿ ಅತ್ತೆ ಹೇಳಿದ್ದಾರೆ.

ತಮಗೆ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ನಮ್ಮ ಅತ್ತೆ-ಮಾವ ಸೇರಿ ನನಗೆ ಅಂಗಡಿ ಹಾಕಿಕೊಟ್ಟಿದ್ದಾರೆ. ಇದರಿಂದ ಹೊಲ ಕೆಲಸಕ್ಕೆ ಹೋಗುವುದು ತಪ್ಪಿದೆ. ಇದು ಯಾವ ಜನ್ಮದ ಋಣಾನುಬಂಧವೋ ಏನೋ ಎಂದು ಸೊಸೆ ಕುಮಾರಿ ಹೇಳಿದ್ದಾರೆ.

ಒಟ್ಟಿನಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜಿಲ್ಲೆಯಲ್ಲಿ ಅತ್ತೆಯೊಬ್ಬರು ತಮ್ಮ ಸೊಸೆಗೆ ಈ ರೀತಿಯಾಗಿ ಸ್ವಾವಲಂಬನೆಯ ಕಾರ್ಯ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನು ಓದಿ : ಉತ್ತರಕನ್ನಡ ಜಿಲ್ಲೆಯಲ್ಲಿ ಎನ್ ಎ ಐ ದಾಳಿ

ಶಿರೂರು ಸಂತ್ರಸ್ತರಿಗೆ ಇನ್ನೂ ಸಿಗದ ನ್ಯಾಯ