ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಯಲ್ಲಾಪುರ(Yallapur) : ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನ ಬಂಧಿಸಿದ್ದಾರೆ.
ಅಕ್ರಮವಾಗಿ ವನ್ಯಪ್ರಾಣಿಗಳನ್ನು(Wild Animals) ಬೇಟೆಯಾಡಿ ಮಾಂಸ ದಾಸ್ತಾನು ಮಾಡಿದ್ದ ಆರೋಪದ ಮೇಲೆ ತಂದೆ-ಮಗನನ್ನು ಬಂಧಿಸಲಾಗಿದೆ.
ಯಲ್ಲಾಪುರ(Yallapur) ತಾಲೂಕಿನ ಹಳಬೈಲ್ ಶಾಖಾ ವ್ಯಾಪ್ತಿಯ ಕಣ್ಣಿಗೇರಿ ಗ್ರಾಮದ ಹಳಿಯಾಳ ಕ್ರಾಸ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಹಳಿಯಾಳ ಕ್ರಾಸ್ ನಿವಾಸಿಗಳಾದ ಇನಾಸ್ ಬಸ್ತ್ಯಾಂವ್ ಸಿದ್ದಿ (55) ಹಾಗೂ ಅವರ ಪುತ್ರ ಪ್ರಕಾಶ್ ಇನಾಸ್ ಸಿದ್ದಿ (27) ಬಂಧಿತರಾಗಿದ್ದಾರೆ.
ದಾಳಿ ಸಂದರ್ಭದಲ್ಲಿ ಎರಡು ಗಂಡು ಉಡಗಳ ಮೃತದೇಹ ಪತ್ತೆಯಾಗಿದೆ. ಅಲ್ಲದೆ, ಬೇಟೆಗೆ ಬಳಸಲಾಗಿದೆ ಎನ್ನಲಾದ ಎರಡು ಕತ್ತಿ ಹಾಗೂ ಒಂದು ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ಅವರ ನೇತೃತ್ವದಲ್ಲಿ ಹಾಗೂ ವಲಯ ಅರಣ್ಯಾಧಿಕಾರಿ ಮಂಜುನಾಥ್ ಎಚ್. ನಾಯ್ಕ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು..
Arrest/ ಅರಣ್ಯ ಇಲಾಖೆ ಕಾರ್ಯಾಚರಣೆ. ಅಪ್ಪ-ಮಗನ ಬಂಧನ.