ಭಟ್ಕಳ: ಇವತ್ತು ಇಡೀ ದೇಶದಾದ್ಯಂತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ರಾಷ್ಟ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಆದರೆ ಭಟ್ಕಳ ತಾಲೂಕಿನ ರಾಷ್ಟ್ರೀಕೃತ ಬ್ಯಾಂಕ್ ವೊಂದು ಸ್ವಾತಂತ್ರ್ಯ ಉತ್ಸವ ತಮಗೆ ಸಂಬಂಧವೇ ಇಲ್ಲವೆಂದು ವರ್ತಿಸಿದೆ. ಆಗಸ್ಟ್ 15 ಕ್ಕೆ ಧ್ವಜಾರೋಹಣ ಮಾಡದೇ ದೇಶಕ್ಕೆ ಅಗೌರವ ತೋರಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಭಟ್ಕಳ ತಾಲೂಕಿನ ಶಿರಾಲಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಧ್ವಜಾರೋಹಣ ನೆರವೇರಿಸದೆ ದೇಶಕ್ಕೆ ಅಗೌರವ ತೋರಿದ್ದಾರೆ. ಸ್ವಾತಂತ್ರ್ಯ ಉತ್ಸವದ ದಿನವಾದ ಇಂದು ಬ್ಯಾಂಕ್ ವ್ಯವಸ್ಥಾಪಕರಾಗಲಿ, ಸಿಬ್ಬಂದಿಯಾಗಲಿ ಯಾರೂ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಸುಸಜ್ಜಿತ ಬ್ಯಾಂಕ್‌ ಕಟ್ಟಡವಿದೆ. ಕಟ್ಟಡದ ಮುಂಭಾಗದಲ್ಲಿ ಧ್ವಜಾರೋಹಣಕ್ಕಾಗಿ ಕಟ್ಟೆ ಕೂಡ ಕಟ್ಟಿಸಲಾಗಿದೆ. ಆದರೂ ಸಹ ಇಂದು ಧ್ವಜಾರೋಹಣ ಮಾಡದೆ ಇರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹರ್ ಘ‌ರ್ ತಿರಂಗ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಆಗಸ್ಟ್‌ 13ರಿಂದ 15ರ ತನಕ ಪ್ರತಿ ಮನೆ ಮನೆಯಲ್ಲಿಯೂ ರಾಷ್ಟ ಧ್ವಜ ಹಾರಿಸಬೇಕು ಎನ್ನುವ ಉದ್ದೇಶಕ್ಕಾಗಿ ಕಾರ್ಯಕ್ರಮವನ್ನು ಜಾರಿಗೆ ತಂದು ಎಲ್ಲರಿಗೂ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಆದರೆ, ಸರ್ಕಾರದ ಸಂಬಳ ಪಡೆಯುವ ಬ್ಯಾಂಕ್ ಅಧಿಕಾರಿಗಳು ಸಿಬ್ಬಂದಿಗಳು ಧ್ವಜಾರೋಹಣ ಮಾಡೋಕೆ ಮನಸ್ಸು ಮಾಡದಿರುವುದು ರಾಷ್ಟ್ರಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವಿದ್ಯಾವಂತರಂತೆ ವರ್ತಿಸಿದ ದೇಶಕ್ಕೆ ಅಗೌರವ ತೋರಿದ ಇಂತಹ ನೌಕರಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿರಾಲಿಯ ಆಟೋ ಚಾಲಕ ಪರಶುರಾಮ ಎಂಬುವವರು ಒತ್ತಾಯಿಸಿದ್ದಾರೆ.