ಕಾರವಾರ(KARWAR) :  ಗೌರಿ ಗಣೇಶ ಹಬ್ಬ(GOWRI GANESH FESTIVAL) ಹಾಗೂ ಈದ್ ಮಿಲಾದ್ (EID MILAD)ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಶಾಂತಿ ಸೌಹಾರ್ದ ಸಭೆ ಕಾರವಾರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಉಭಯ ಧರ್ಮಗಳ ಹಬ್ಬದ ಆಚರಣೆ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ  ಸೂಚನೆ ನೀಡಲಾಯಿತು.

ಪ್ರತಿಯೊಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ಸ್ವಯಂಸೇವಕರನ್ನು ಇಟ್ಟುಕೊಳ್ಳಬೇಕು ಹಾಗೂ ಅವರನ್ನು ಸುಲಭವಾಗಿ ಗುರುತಿಸಿಕೊಳ್ಳುವ ಸಲುವಾಗಿ ಅವರಿಗೆ ಬ್ಯಾಡ್ಜ್ ಟಿ-ಶರ್ಟ್ ಕ್ಯಾಪನ್ನು ಗಣೇಶೋತ್ಸವ ಸಮಿತಿ ವತಿಯಿಂದ ನೀಡುವುದು. ಪೆಂಡಾಲ್ಗಳನ್ನು ಕಾಪಾಡುವ ಜವಾಬ್ದಾರಿಯನ್ನು ಮತ್ತು ಸದರಿ ಪ್ರದೇಶದ ಉಸ್ತುವಾರಿಯನ್ನು ಸಂಬಂಧಪಟ್ಟ ವ್ಯವಸ್ಥಾಪಕರು ವಹಿಸಿಕೊಳ್ಳಬೇಕು. ಈ ಬಗ್ಗೆ ಅವರಿಗೆ ಸ್ಪಷ್ಟ ಮಾಹಿತಿಯನ್ನು ಮುಂಚಿತವಾಗಿಯೇ ಕೊಡುವಂತೆ ತಿಳಿಸಲಾಯಿತು.

ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಉತ್ಸವಕ್ಕೆ ಸಂಬಂಧಿಸಿದಂತೆ ಆಯೋಜಕರನ್ನು ಸಂಪರ್ಕಿಸಿ, ವಿಗ್ರಹ ಪ್ರತಿಷ್ಠಾಪನೆಯ ಸಂಬಂಧ ತಾಲೂಕಾ ಮಟ್ಟದಲ್ಲಿ ಆಯೋಜಿಸಿರುವ ಸಿಂಗಲ್ ವಿಂಡೋ ಮುಖಾಂತರ ಪೂರ್ವಾನುಮತಿಯನ್ನು ನಗರಸಭೆ/ಪುರಸಭೆ/ಪಟ್ಟಣ ಪಂಚಾಯತ/ ಗ್ರಾಮ ಪಂಚಾಯತ, ಪೊಲೀಸ್ ಇಲಾಖೆ. ಅಗ್ನಿ ಶಾಮಕ ಇಲಾಖೆ(FIRE DEPARTMENT), ಹೆಸ್ಕಾಂ ಇಲಾಖೆ(HESCOM DEPARTMENT) ಹಾಗೂ ಇತರೇ ಸಂಬಂಧಿಸಿದ ಇಲಾಖೆ ವತಿಯಿಂದ ಅನುಮತಿ ಪಡೆದುಕೊಳ್ಳುವಂತೆ ತಿಳಿಸಲಾಯಿತು.

ಗಣೇಶ ಮೂರ್ತಿ ಪ್ರತಿಷ್ಟಾಪನೆ ದಿವಸ ಹಾಗೂ ವಿಸರ್ಜನೆಯ ಸಂದರ್ಭದಲ್ಲಿ ಪ್ರಚೋಧನಕಾರಿ ಘೋಷಣೆಗಳನ್ನು ಕೂಗದಿರುವಂತೆ ತಿಳುವಳಿಕೆ ನೀಡಲಾಯಿತು.

ಸುಗಮ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಸಂಘಟಕರಿಗೆ ತಿಳುವಳಿಕೆ ನೀಡಲಾಯಿತು.

ಗಣೇಶ ಪೆಂಡಾಲುಗಳಲ್ಲಿ ವಿದ್ಯುತ್ ಅವಘಡಗಳು ನಡೆಯದಂತೆ ನೋಡಿಕೊಳ್ಳುವ ಸಲುವಾಗಿ, ಸಂಬಂಧಪಟ್ಟ ವ್ಯವಸ್ಥಾಪಕರಿಗೆ ಸಲಹೆ ಸೂಚನೆಗಳನ್ನು ನೀಡಿ ಅವರು ಕೆಪಿಟಿಸಿಎಲ್ ಅಧಿಕಾರಿಗಳಿಂದ ಉತ್ತಮ ರೀತಿಯಲ್ಲಿ ಹಾಗೂ ಸುರಕ್ಷಿತ ರೀತಿಯಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಏರ್ಪಡಿಸುವಂತೆ ತಿಳಿಸಲಾಯಿತು.

ಗಣೇಶೋತ್ಸವ ಹಬ್ಬದ ಮುಂಜಾಗ್ರತಾ ಕ್ರಮವಾಗಿ ಪೆಂಡಾಲ್ಗಳಲ್ಲಿ ಹಾಗೂ ವಿಸರ್ಜನಾ ಸ್ಥಳಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಅನಾಹುತಗಳು ಸಂಭವಿಸಿದ್ದಲ್ಲಿ ತಕ್ಷಣವೇ ಅಂತಹ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಯನ್ನು ( ನೀರು ಮತ್ತು ಮರುಳು ತುಂಬಿದ ಬಕೆಟ್‌ಗಳು) ಇಡುವಂತೆ ವ್ಯವಸ್ಥಾಪಕರಿಗೆ ತಿಳುವಳಿಕೆ ನೀಡಲಾಯಿತು.

ರಾತ್ರಿ ವೇಳೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಸ್ಥಳ /ಮಂಟಪ/ಪೆಂಡಾಲ್‌ಗಳಲ್ಲಿ ಯಾವುದೇ ರೀತಿಯ ದುಷ್ಕೃತ್ಯ. ಕಿಡಿಗೇಡಿತನ (Mischief) ಹಾಗೂ ಕೋಮು ಪ್ರಚೋದನೆ ಮಾಡುವಂತಹ ಕೃತ್ಯಗಳು ನಡೆಯದಂತೆ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಪೆಂಡಲ್ಗಳಲ್ಲಿ ಬೆಂಕಿ ಅನಾಹುತಗಳ ಬಗ್ಗೆ ಠಾಣಾ ಸರಹದ್ದಿನಲ್ಲಿರುವ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಪೂರ್ಣ ತಯಾರಿಯಲ್ಲಿರುವಂತೆ ಅಗ್ನಿಶಾಮಕ ಇಲಾಖೆಯವರಿಗೆ ಸೂಚಿಸಲಾಯಿತು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದವರ ಜೊತೆ ಸಂಪರ್ಕ ಇಟ್ಟುಕೊಂಡು ನಗರ/ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ಮಂಟಪಗಳಿಗೆ ನೀಡಲಾಗಿರುವ ತಾತ್ಕಾಲಿಕ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತರಹದ ಶಾರ್ಟ್ ಸರ್ಕ್ಯೂಟ್ ಗಳು ಆಗದಂತೆ ಉತ್ತಮ ಉಪಕರಣಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ತಿಳಿಸಲಾಯಿತು.

ಮತೀಯವಾಗಿ ಸೂಕ್ಷ್ಮವಾಗಿರುವ ಹಾಗೂ ಭದ್ರತೆಯ ದೃಷ್ಟಿಯಿಂದ ವಿಶೇಷ ಪೆಂಡಾಲ್‌ಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಿ.ಸಿ.ಟಿ.ವಿ.ಯನ್ನು ಅಳವಡಿಸಲು ಸಂಘಟಕರಿಗೆ ತಿಳಿಸಲಾಯಿತು.

ಪೆಂಡಾಲ್ ಮುಂಭಾಗದಲ್ಲಿ ಒಂದು ಬೋರ್ಡನ್ನು (2X3) ಸೈಜಿನಲ್ಲಿ ತಯಾರಿಸಿ. ಸದರ ಬೋರ್ಡನಲ್ಲಿ ಶ್ರೀ ಗಣೇಶ ವಿಗ್ರಹ ಮಂಡಳಿಯ ವ್ಯವಸ್ಥಾಪಕರ ಹೆಸರು, ಮೊಬೈಲ್ ನಂಬರ್ ಮತ್ತು ರಾತ್ರಿ/ಹಗಲು ಕರ್ತವ್ಯ ನಿರ್ವಹಿಸುವ ಸ್ವಯಂ ಸೇವಕರ ಹೆಸರು, ಮೊಬೈಲ್ ನಂಬರ್, ಸ್ಥಳೀಯ ಸಿಪಿಐ/ಪಿಐ/ ಪಿಎಸ್‌ಐ ರವರ ಮೊಬೈಲ್ ನಂಬರ್, ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ, ಹತ್ತಿರದ ಅಗ್ನಿಶಾಮಕ ಇಲಾಖೆಯ ದೂರವಾಣಿ ಸಂಖ್ಯೆ. ಸ್ಥಳೀಯ ಅಂಬ್ಯುಲೆನ್ಸ್ ಮೊಬೈಲ್ ನಂಬರಗಳನ್ನು ಕಡ್ಡಾಯವಾಗಿ ನಮೂದಿಸಿ. ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಹಾಕಿಕೊಳ್ಳುವ ವ್ಯವಸ್ಥೆ ಮಾಡುವಂತೆ ಮುಖಂಡರಿಗೆ ತಿಳಿಸಲಾಯಿತು.

ಗಣೇಶ ಮೂರ್ತಿ ಪ್ರತಿಷ್ಠಾಪನಾ ಪೆಂಡಾಲ್‌ಗಳಲ್ಲಿ ಧ್ವನಿವರ್ಧಕವನ್ನು ಬಳಸುವ ಪೂರ್ವದಲ್ಲಿ ಸೂಕ್ತ ದಾಖಲಾತಿಗಳನ್ನು ನೀಡಿ ಅನುಮತಿಯನ್ನು ಪಡೆದು ಸುಪ್ರೀಮ್ ಕೋರ್ಟ್ ನಿರ್ದೇಶನಕ್ಕೆ ಅನುಗುಣವಾಗಿ ಬಳಸುವಂತೆ ತಿಳಿಸಲಾಯಿತು.

ಗಣೇಶ ಪ್ರತಿಮೆಗಳು ಪ್ರತಿಷ್ಠಾಪಿಸುವ ಸ್ಥಳ ಮತ್ತು ಧ್ವನಿ ವರ್ಧಕಗಳ ಬಳಕೆ. ಮತ್ತು ಅವುಗಳಲ್ಲಿ ಅಶ್ಲೀಲ ಹಾಡುಗಳು ಮತ್ತು ಪ್ರಚೋದನಾಕಾರಿ ಸ್ಟೋಗನ್ಗಳನ್ನು ಬಳಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಕೊಡತಕ್ಕದ್ದು, ಏಕೆಂದರೆ ಧ್ವನಿವರ್ಧಕ ಬಳಸಲು ರಾಜ್ಯ ಸರ್ಕಾರದ ಪರಿಷ್ಕೃತ ಆದೇಶದಲ್ಲಿ ನಿಷೇಧ ಮಾಡಿರುವುದರಿಂದ, ಸದರ ವಿಷಯವು ಅತಿ ಸೂಕ್ಷ್ಮ ಎಂದು ಪರಿಗಣಿಸುವ ಕುರಿತು ತಿಳುವಳಿಕೆ ನೀಡಲಾಯಿತು.

ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಪೆಂಡಾಲ್/ಶಾಮಿಯಾನದ ಒಳಗೆ, ಹೊರಗೆ ಅಥವಾ ಪಕ್ಕದಲ್ಲಿ ಯಾವುದೇ ಅಡುಗೆ ಮಾಡುವ ಅಥವಾ ಬೇಯಿಸುವುದಕ್ಕೆ ಅವಕಾಶ ಮಾಡಿಕೊಡಬಾರದು ಹಾಗೂ ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆಗೆ ಉಪಯೋಗಿಸುವ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳುವ ಬಗ್ಗೆ ಮುಖಂಡರಿಗೆ ತಿಳಿಸಲಾಯಿತು.

ಪೆಂಡಾಲ್/ಶಾಮಿಯಾನದ ಒಳಗೆ ಸಾರ್ವಜನಿಕರ ಒತ್ತಡ ಜಾಸ್ತಿ ಇರುವ ಕಡೆಗಳಲ್ಲಿ ಕ್ಯೂ ಪದ್ಧತಿ ಅನುಸರಿಸುವುದು ಹಾಗೂ ಸಾಕಷ್ಟು ಪ್ರಮಾಣದ ಬಿದಿರಿನ ಬ್ಯಾರಿಕೇಡಗಳನ್ನು ಪೆಂಡಾಲ್‌ ನ ಒಳಗೆ ಮತ್ತು ಹೊರಗೆ ಅಳವಡಿಸಿಕೊಂಡು ಓಡಾಡಲು ಅವಕಾಶ ಮಾಡಿಕೊಡುವುದು. ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುವುದು.

ಹಬ್ಬದ ಸಮಯದಲ್ಲಿ ಪಟಾಕ್ಷಿ (ಸಿಡಿಮದ್ದು) ಮಾರಾಟ ಮಾಡುವವರು ಜಿಲ್ಲಾಧಿಕಾರಿಗಳಿಂದ ಲೈಸನ್ಸ್ ಪಡೆದಿರಬೇಕು ಒಂದು ವೇಳೆ ಲೈಸೆನ್ಸ್ ಪಡೆದರೂ ನಿಗದಿ ಪಡಿಸಿದ ಸ್ಥಳದಲ್ಲಿ ಪಟಾಕ್ಷಿ ಮಾರಾಟ ಮಾಡುವಂತೆ  ನೀಡಿದ ಶರತ್ತುಗಳನ್ನು ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳುವುದು. ಪಟಾಕ್ಷಿಗಳನ್ನು ದಾಸ್ತಾನು ಮಾಡದಂತೆ ನೋಡಿಕೊಳ್ಳುವುದು ಹಾಗೂ ಹೆಚ್ಚು ಹೆಚ್ಚು ಹಸಿರು ಪಟಾಕಿಗಳನ್ನು ಬಳಸುವಂತೆ ತಿಳಿಸಲಾಯಿತು.

ಪ್ಲಾಸ್ಟಿಕ್ ಪ್ಲೆಕ್ಸ್ ಮತ್ತಿತರ ವಸ್ತುಗಳ ಬಳಕೆ ನಿಷೇಧಿಸುವುದು. ಹಾಗೂ ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯ ತನಕ ಧ್ವನಿವರ್ಧಕಗಳ ಬಳಕೆ ಮಾಡದಂತೆ ತಿಳಿಸಲಾಯಿತು.

ಪಿಓಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವುದು ನಿಷೇಧವಿದ್ದು, ಎಲ್ಲಾ ಗಣೇಶೋತ್ಸವ ಸಮಿತಿಯ ಸಂಘಟಕರು ಕಟ್ಟು ನಿಟ್ಟಾಗಿ ಪಾಲಿಸುವುದು.

ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್ ಬ್ಯಾಂಕ್‌ಗಳಲ್ಲಿ, ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡುವ ಕುರಿತು ಕ್ರಮ ವಹಿಸುವುದು.

ಗಣೇಶ ವಿಸರ್ಜನೆಯ ಮೆರವಣಿಗೆಯು ಕಾಲ್ನಡಿಗೆಯಲ್ಲಿ ಸಾಗುವುದರಿಂದ ಸದ್ರಿ ಮಾರ್ಗವನ್ನು ಮುಂಚಿತವಾಗಿಯೇ ಪರಿಶೀಲಿಸಿ ನೈಸರ್ಗಿಕ ಅಡಚಣೆಗಳಾದ ಒಣಗಿದ ಮರಗಳು, ಮರದ ಕೊಂಬೆಗಳು, ನೇತಾಡುವ ವಿದ್ಯುತ್ ತಂತಿ ಇತ್ಯಾದಿಗಳ ಬಗ್ಗೆ ಪತ್ತೆ ಹಚ್ಚಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಸರಿಪಡಿಸುವ ಕ್ರಮ ಕೈಗೊಳ್ಳಲು ತಿಳಿಸಲಾಯಿತು.
ಗಣೇಶ ಪ್ರತಿಮೆಗಳನ್ನು ಕೊಂಡೊಯ್ಯುವ ಎಲ್ಲಾ ವಾಹನಗಳನ್ನು ಪ್ರತಿಷ್ಠಾಪನೆಯ ದಿವಸ ಹಾಗೂ ವಿಸರ್ಜನೆಯ ದಿವಸ ವಾಹನಗಳ ಸುಸ್ಥಿತಿಯ ಬಗ್ಗೆ ಪರಿಶೀಲಿಸಿಕೊಳ್ಳುವಂತೆ ಹಾಗೂ ನುರಿತ ಚಾಲಕರನ್ನು ನಿಯೋಜಿಸಿಕೊಳ್ಳುವಂತೆ ತಿಳಿಸಲಾಯಿತು.

ವಿಸರ್ಜನೆಯ ವೇಳೆಯಲ್ಲಿ ಸ್ಪೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗುವುದಾಗಲಿ ಅಥವಾ ಅಂತಹ ವಸ್ತುಗಳು ಗಣೇಶ ಪೆಂಡಾಲ್‌ಗಳಲ್ಲಿ ಇರಿಸಿಕೊಳ್ಳದಂತೆ ತಿಳಿಸಲಾಯಿತು.

ಗಣೇಶ ಮೂರ್ತಿ ವಿಸರ್ಜನೆಯು ಆಯಾ ಠಾಣಾ ವ್ಯಾಪ್ತಿಯ ಹಳ್ಳ, ಕೆರೆ, ಸಮುದ್ರ, ಆಳವಾದ ಬಾವಿಗಳಲ್ಲಿ, ನಡೆಯಲ್ಲಿದ್ದು, ಆ ಸಮಯದಲ್ಲಿ ಸಾರ್ವಜನಿಕರು ನೀರಿನಲ್ಲಿ ಇಳಿದು ಅಥವಾ ಈಜಾಡಲು ಹೋಗಿ ಜೀವ ಹಾನಿ ಉಂಟಾಗುವ ಸಾದ್ಯತೆ ಇರುತ್ತದೆ. ಆದ್ದರಿಂದ ವಿಸರ್ಜನೆಯ ಸಮಯದಲ್ಲಿ ಈಜುಬಲ್ಲ ಯುವಕರನ್ನು ಹಾಜರಿಟ್ಟುಕೊಳ್ಳುವಂತೆ ಸಂಘಟಕರಿಗೆ ತಿಳಿಸಲಾಯಿತು.

ಶ್ರೀ ಗಣೇಶ ವಿಗ್ರಹ ವಿಸರ್ಜನೆಯ ಸ್ಥಳದಲ್ಲಿ ಕರೆ, ನದಿ, ಸಮುದ್ರದ ದಡದಲ್ಲಿ ವಿಗ್ರಹವನ್ನು ವಿಸರ್ಜನೆ ಮಾಡಲು ಅನುಕೂಲವಾಗುವಂತೆ. ಮೆಟ್ಟಿಲುಗಳ ವ್ಯವಸ್ಥೆ ಮಾಡಲು, ಸ್ಥಳೀಯ ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ, ಪುರಸಭೆ, ನಗರಸಭೆಗಳಿಗೆ ಪತ್ರ ವ್ಯವಹಾರ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಘಟಕರಿಗೆ ಸೂಚಿಸಲಾಯಿತು.

ವಿಗ್ರಹವನ್ನು ನೀರಿಗೆ ಮುಳುಗಿಸುವ ವೇಳೆ 5 ಜನಕ್ಕಿಂತ ಹೆಚ್ಚು ಜನರು ನೀರಿಗೆ ಇಳಿಯಬಾರದು. ಹಾಗೂ ವಿಸರ್ಜನೆಯ ವೇಳೆಯಲ್ಲಿ ನುರಿತ ಈಜುಗಾರರನ್ನು ಮತ್ತು ಮುಳುಗುವವರನ್ನು ಸ್ವಯಂ ಸೇವಕರನ್ನಾಗಿ ನೇಮಿಸಿಕೊಳ್ಳಲು ತಿಳಿಸಲಾಯಿತು.

ಗಣೇಶ ಮೂರ್ತಿ ಮೆರವಣಿಗೆ ಈ ಹಿಂದಿನ ವರ್ಷ ನಡೆಸಿದ ಮಾರ್ಗದಲ್ಲಿಯೇ ಮೆರವಣಿಗೆ ನಡೆಸುವುದು. ಹೊರತಾಗಿ ಪರ್ಯಾಯ ಮಾರ್ಗದಲ್ಲಿ ಮೆರವಣಿಗೆ ನಡೆಸದಂತೆ ನೋಡಿಕೊಳ್ಳುವ ಬಗ್ಗೆ ಮುಖಂಡರಿಗೆ ತಿಳಿಸಲಾಯಿತು.

ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಬಹುದಾದ ಪ್ರಚೋದನಾಕಾರಿಯಾಗಿ ಪೋಸ್ಟ್‌ಗಳನ್ನು ಹಾಕದಂತೆ ತಿಳಿಸಲಾಯಿತು.

ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಾಡುಗಳನ್ನು ಉಪಯೋಗಿಸುವಂತೆ ತಿಳಿಸಲಾಯಿತು.

ಬಲವಂತದಿಂದ ಯಾರಿಂದಲೂ ಚಂದಾ ವಸೂಲಿ ಮಾಡಬಾರದು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಲು ತಿಳಿಸಲಾಯಿತು.

ಗಣೇಶ ಮೂರ್ತಿ ಮೆರವಣಿಗೆ ಹಾಗೂ ಈದ್-ಮಿಲಾದ್ ಹಬ್ಬದ ಮೆರವಣಿಗೆ ಒಂದೇ ದಿನ (ದಿನಾಂಕ: 16-09- 2024) ಇರುವ ಸಂದರ್ಭದಲ್ಲಿ ಎರಡೂ ಮೆರವಣಿಗೆಗಳು ಮುಖಾಮುಖಿಯಾಗದಂತೆ ಬೇರೆ ಬೇರೆ ಸಮಯದಲ್ಲಿ ಮೆರವಣಿಗೆಗಳನ್ನು ನಡೆಸುವಂತೆ ಸಂಘಟಕರಿಗೆ ತಿಳುವಳಿಕೆ ನೀಡಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು ಉತ್ತರ ಕನ್ನಡ, ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ ಕಾರವಾರ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಾರವಾರ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಾರವಾರ, ಹಾಗೂ ಇತರೇ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲಾ ವ್ಯಾಪ್ತಿಯ ವಿವಿಧ ಸಮುದಾಯದ ಮುಖಂಡರು ಹಾಜರಿದ್ದರು.

ಇದನ್ನು ಓದಿ : ಉಪನ್ಯಾಸಕರ ಅಮಾನವೀಯತೆಗೆ ಆಕ್ರೋಶ

ಇನ್ನೊಂದು ತಿಂಗಳಲ್ಲಿ ಶಿಕ್ಷಕರ ಬೇಡಿಕೆ ಈಡೇರಿಕೆ

ಕಾರವಾರದಲ್ಲಿ ಮಹಿಳೆ ಆತ್ಮಹತ್ಯೆಯೋ , ಕೊಲೆಯೋ?