ಬೆಂಗಳೂರು :  ಜೂನ್ ಒಂದರಿಂದ  ನೀವೇನಾದ್ರು ಅಪ್ರಾಪ್ತರಿಗೆ ವಾಹನ ಕೊಟ್ರೆ 25,000 ರೂ.ದಂಡ ನೀಡಬೇಕು ಅಲ್ಲದೇ ನೋಂದಣಿ ರದ್ದಾಗಲಿದೆ.  ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹಲವು ಕಠಿಣ ನಿಯಮವನ್ನು ಪ್ರಕಟಿಸಿದೆ.

ಭಾರತದಲ್ಲಿ ಡ್ರೈವಿಂಗ್‌ ಲೈಸೆನ್ಸ್ ಪಡೆಯಲು ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ. ಜೂನ್‌ 1ರಿಂದ ಸರ್ಕಾರಿ ಆರ್‌ಟಿಒಗಳ ಬದಲಿಗೆ ಖಾಸಗಿ ಚಾಲನಾ ತರಬೇತಿ ಕೇಂದ್ರಗಳಲ್ಲಿ ಡ್ರೈವಿಂಗ್‌ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಈ ಸಂಬಂಧ ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗಳು ಜೂನ್ ಒಂದರಿಂದ ಹೊಸ ನಿಯಮಗಳನ್ನು ಹೊರಡಿಸಲಿವೆ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದ್ದಕ್ಕಾಗಿ ಪೋಷಕರು ದಂಡ ತೆತ್ತಬೇಕಾಗುತ್ತದೆ.

  ಹೊಸ ನಿಯಮಗಳ ಪ್ರಕಾರ, ಅತಿ ವೇಗದಲ್ಲಿ ವಾಹನ ಚಲಾಯಿಸಿದರೆ 1000 ರಿಂದ 2000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದಿದ್ದರೆ 100 ರೂಪಾಯಿ ದಂಡ ತೆರಬೇಕು.

ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ ಭಾರಿ ದಂಡ ವಿಧಿಸಲಾಗುತ್ತದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಚಾಲಕರು 25,000 ರೂ.ಗಳವರೆಗೆ ದಂಡವನ್ನು ಪಾವತಿಸಬೇಕು. ಅಲ್ಲದೆ ಡ್ರೈವಿಂಗ್ ಲೈಸೆನ್ಸ್ ಕೂಡ ರದ್ದಾಗಬಹುದು. ಅಪ್ರಾಪ್ತ ವಯಸ್ಕರಿಗೆ ಮುಂದೆ 25 ವರ್ಷ ವಯಸ್ಸಾಗುವವರೆಗೆ ಪರವಾನಗಿ ಸಿಗುವ ಚಾನ್ಸೇ ಇಲ್ಲ.

ಡ್ರೈವಿಂಗ್ ಲೈಸನ್ಸ್ ನವೀಕರಣಕ್ಕೆ  200 ರೂ. ಇದ್ದು, ಗ್ರೇಸ್‌‍ ಅವಧಿಯ ನಂತರ 300 ರೂ. ಜೊತೆಗೆ  ಹೆಚ್ಚುವರಿ ಶುಲ್ಕ 1,000 ರೂ. ವರ್ಷಕ್ಕೆ ಪಾವತಿಸಬೇಕು ಸೇರಿದಂತೆ ಹೆಚ್ಚೆಚ್ಚು ಹಣ ಪಾವತಿಸಬೇಕಾಗುತ್ತದೆ. ಹೀಗಾಗಿ ವಾಹನ ಹೊಂದಿದವರು ನಿಯಮಗಳನ್ನು ಪಾಲಿಸಿದರೆ ಒಳಿತು.